ಮಡಿಕೇರಿ : ಕೊಲೆಯಾಗಿದ್ದ ಮಹಿಳೆ ೫ ವರ್ಷದ ಬಳಿಕ ಹೋಟೆಲಿನಲ್ಲಿ ಗಂಡನ ಕೈಗೆ ಸಿಕ್ಕಿಬಿದ್ದಳು!

ಪತ್ನಿಯನ್ನು ಸಾಯಿಸಿದ ಆರೋಪದಲ್ಲಿ ಜೈಲಿಗೆ ಹೋಗಿ ಬಂದಿದ್ದ ಗಂಡನಿಗೆ ಶಾಕ್

ಮಡಿಕೇರಿ : ಐದು ವರ್ಷದ ಹಿಂದೆ ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಹೆಂಡತಿ ಹೋಟೆಲೊಂದರಲ್ಲಿ ಪ್ರಿಯಕರನ ಜೊತೆ ಗಂಡನ ಕೈಗೆ ಸಿಕ್ಕಿಬಿದ್ದ ಸಿನಿಮಾ ಮಾದರಿ ಘಟನೆಯೊಂದು ಮಡಿಕೇರಿಯಲ್ಲಿ ಸಂಭವಿಸಿದೆ. ಕುಶಾಲನಗರ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿದ್ದ ಈ ಕೊಲೆ ಪ್ರಕರಣ ಸಸ್ಪೆನ್ಸ್​ ಥ್ರಿಲ್ಲರ್ ಸಿನಿಮಾದಂತೆ ಅನಾವರಣಗೊಂಡಿದೆ. ತಾನು ಮಾಡದ ಕೊಲೆಗಾಗಿ ಗಂಡ ಎರಡು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು.

ಪೊಲೀಸರು ಮಲ್ಲಿಗೆ ಎಂಬಾಕೆಯನ್ನು ಕೊಂದ ಆರೋಪದಲ್ಲಿ ಆಕೆಯ ಗಂಡ ಸುರೇಶ್‌ನನ್ನು ಬಂಧಿಸಿದ್ದರು. ಆದರೆ ಕೊಲೆಯಾಗಿದ್ದಾಳೆ ಎಂದು ಭಾವಿಸಲಾಗಿದ್ದ ಮಲ್ಲಿಗೆ ಮಂಗಳವಾರ ಸಂಜೆ ಮಡಿಕೇರಿ ನಗರದ ಹೋಟೆಲ್​ ಒಂದರಲ್ಲಿ ಪ್ರಿಯಕರನ ಜತೆ ಇರುವುದನ್ನು ಸುರೇಶ್​ ಮತ್ತು ಅವನ ಸ್ನೇಹಿತರು ನೋಡಿ ತಕ್ಷಣವೇ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಡಿಕೇರಿ ನಗರ ಪೊಲಿಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಆದಿವಾಸಿ ಜನಾಂಗದ ಸುರೇಶ್ ಸುಮಾರು ೧೮ ವರ್ಷಗಳ ಹಿಂದೆ ಮಲ್ಲಿಗೆ ಎಂಬಾಕೆಯನ್ನು ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ೨೦೨೦ರ ನವೆಂಬರ್​ನಲ್ಲಿ ಮಲ್ಲಿಗೆ ನಾಪತ್ತೆಯಾಗಿದ್ದಾಳೆ. ಸುರೇಶ್​ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಹುಡುಕಿದರೂ ಮಲ್ಲಿಗೆ ಸಿಕ್ಕಿರಲಿಲ್ಲ. ಪತ್ನಿ ಗಣೇಶ್​ ಎಂಬಾತನ ಜೊತೆ ಅಕ್ರಮ ಸಂಬAಧ ಇಟ್ಟುಕೊಂಡು ಓಡಿ ಹೋಗಿರುವುದು ಗೊತ್ತಿದ್ದರೂ ಸುರೇಶ್​ ಮನನೊಂದು ಸುಮ್ಮನಾಗಿದ್ದರು.

































 
 

೨೦೨೧ರ ಜೂನ್‌ನಲ್ಲಿ ಖಾಸಗಿ ಕಾರಿನಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಠಾಣೆಯ ಪೊಲೀಸರು ಬಂದು ಮಹಿಳೆಯೊಬ್ಬಳ ಮೃತದೇಹ ಸಿಕ್ಕಿದೆ, ಬಂದು ಗುರುತುಪತ್ತೆ ಮಾಡು ಎಂದು ಸುರೇಶನನ್ನು ಬಲವಂತದಿAದ ಬೆಟ್ಟದಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯಾವುದೋ ಮಹಿಳೆಯ ಸೀರೆ ಲಂಗ, ಒಳ ಉಡುಪು ಚಪ್ಪಲಿ ತೋರಿಸಿ, ಇದು ನಿನ್ನದೇ ಹೆಂಡತಿಯದ್ದು. ನೀನೇ ಕೊಲೆ ಮಾಡಿದ್ದಿ, ಒಪ್ಪಿಕೊ ಎಂದು ಚಿತ್ರಹಿಂಸೆ ಕೊಟ್ಟಿದ್ದರು. ೨೦೨೧ರಲ್ಲಿ ಬೆಟ್ಟದಪುರ ಠಾಣೆಯಲ್ಲಿ ಸುರೇಶ್ ವಿರುದ್ಧ ಪ್ರಕರಣ ದಾಖಲಾಗಿ ನಂತರ ಅವರು ಜೈಲು ಸೇರಿದ್ದಾರೆ. ಮೈಸೂರಿನ ಪಾಂಡು ಪೂಜಾರಿ ಎಂಬ ವಕೀಲರ ಕೊರಿಕೆ ಮೇರೆಗೆ ಮಲ್ಲಿಗೆಯ ಅಸ್ಥಿಪಂಜರ ಹಾಗೂ ಆಕೆಯ ತಾಯಿಯ ರಕ್ತದ ಮಾದರಿ ಸಂಗ್ರಹಿಸಿ ಡಿಎನ್​ಎ ಪರೀಕ್ಷೆಗೆ ಕಳುಹಿಸಿದಾಗ ದೇಹ ಆಕೆಯದ್ದಲ್ಲ ಎಂಬ ವರದಿ ಬರುತ್ತದೆ. ಆದರೂ ಬೆಟ್ಟದಪುರ ಪೊಲೀಸರು ಸುರೇಶನನ್ನು ಎರಡು ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡಿರುತ್ತಾರೆ. ೨೦೨೪ರಲ್ಲಿ ಸುರೇಶ್ ಜಾಮೀನಿನಲ್ಲಿ ಬಿಡುಗಡೆಯಾಗುತ್ತಾರೆ. ಕೊಲೆಯಾಗಿರುವ ಮಹಿಳೆ ತನ್ನ ಹೆಂಡತಿಯಲ್ಲ. ತಾನು ಕೊಲೆ ಮಾಡಿಲ್ಲ, ಹೆಂಡತಿಯನ್ನು ಹುಡುಕಿಕೊಡಿ ಎಂದು ಸುರೇಶ್ ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.

ಈಗ ಕೊಲೆಯಾಗಿದ್ದಾಳೆ ಎಂಬುದಾಗಿ ಭಾವಿಸಲಾಗಿದ್ದ ಮಲ್ಲಿಗೆ ಜೀವಂತವಾಗಿ ಹೋಟೆಲ್​​ನಲ್ಲಿ ತಿಂಡಿ ತಿನ್ನುತ್ತಾ ಇರುವುದು ಸುರೇಶ್ ಹಾಗೂ ಅವರ ಸ್ನೇಹಿತರ ಕಣ್ಣಿಗೆ ಬಿದ್ದು ಇಡೀ ಪ್ರಕರಣ ತಿರುವು ಪಡೆದುಕೊಂಡಿದೆ. ಮಲ್ಲಿಗೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಕೆ ತನ್ನ ಪ್ರಿಯಕರ ಗಣೇಶ್ ಎಂಬಾತನ ಜೊತೆ ವಿರಾಜಪೇಟೆ ತಾಲ್ಲೂಕಿನ ಟಿಶೆಟ್ಟಿಗೇರಿ ಗ್ರಾಮದಲ್ಲಿ ವಾಸವಿರುವುದಾಗಿ ಹೇಳಿದ್ದಾಳೆ.
ಮಲ್ಲಿಗೆಯನ್ನು ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಬೆಟ್ಟದಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ನ್ಯಾಯಾಲಯ ಸುಳ್ಳು ಆರೋಪಪಟ್ಟಿ ದಾಖಲಿಸಿದ ಬೆಟ್ಟದಪುರ ಠಾಣೆ ತನಿಖಾಧಿಕಾರಿ, ಮೈಸೂರು ಎಸ್​ಪಿ ಸೇರಿದಂತೆ ಹಲವು ಅಧಿಕಾರಿಗಳನ್ನು ವಿಚಾರಣೆಗೆ ಕರೆದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top