ನಿಯಮ ಇಲ್ಲದೆ ಬೈಕ್ ಟ್ಯಾಕ್ಸಿ ಓಡಾಡುವಂತಿಲ್ಲ ಎಂದ ನ್ಯಾಯಾಲಯ
ಬೆಂಗಳೂರು: ಬೆಂಗಳೂರಿನಲ್ಲಿ ಬಹಳ ಜನಪ್ರಿಯವಾಗಿರುವ ಬೈಕಜ್ ಟ್ಯಾಕ್ಸಿ ಸೇವೆಯನ್ನು 6 ವಾರಗಳಲ್ಲಿ ಸ್ಥಗಿತಗೊಳಿಸಲು ಹೈಕೋರ್ಟ್ ಆದೇಶಿಸಿದೆ. ಓಲಾ, ಉಬರ್ ಕಂಪನಿಗಳು ಬೆಂಗಳೂರು ಸೇರಿ ಕೆಲವು ನಗರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿವೆ.
2022ರಲ್ಲಿ ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ರಾಜ್ಯ ಸರ್ಕಾರಕ್ಕೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆಯ ವೇಳೆ 1988ರ ಮೋಟಾರು ವಾಹನ ಕಾಯ್ದೆ ಹಾಗೂ ಸೆಕ್ಷನ್ 93ರಡಿಯಲ್ಲಿ ಬರುವ ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ಅರ್ಜಿದಾರರು ಬೈಕ್ ಟ್ಯಾಕ್ಸಿ ಸೇವೆ ನೀಡಬಹುದು. ಆದರೆ ರಾಜ್ಯ ಸರ್ಕಾರ ಓಲಾ, ಉಬರ್ ಇನ್ನಿತರ ಬೈಕ್ ಟ್ಯಾಕ್ಸಿಗಳಿಗೆ ನಿಯಮ ರೂಪಿಸಿಲ್ಲ. ನಿಯಮಗಳಿಲ್ಲದೆ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಮಾಡುವಂತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಕರ್ನಾಟಕ ಸಾರಿಗೆ ಇಲಾಖೆಗೆ ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ನಿರ್ದೇಶನ ನೀಡಲಾಗುವುದಿಲ್ಲ. ಹೀಗಾಗಿ 3 ತಿಂಗಳಲ್ಲಿ ನಿಯಮ ರೂಪಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಇನ್ನೂ 6 ವಾರಗಳ ಕಾಲಾವಕಾಶ ನೀಡಿದ್ದು, ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ನ್ಯಾ.ಬಿ.ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ಓಲಾ, ಉಬರ್ ಬೈಕ್ ಟ್ಯಾಕ್ಸಿ ಸೇವೆಗೆ ನಿರ್ಬಂಧ ವಿಧಿಸಿದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.