ಬಜಪೆ: ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಪೇಟೆಯ ಮನೆಯೊಂದರಲ್ಲಿ ಸೋಮವಾರ ಮಧ್ಯರಾತ್ರಿ ಬಳಿಕ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತಂಡಗಳ ತನಿಖೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಗುಭದ್ರತೆಯಲ್ಲಿ ಮನೆಯೊಳಗಿದ್ದ ಲಾಕರ್ ಒಡೆದು ಸುಮಾರು 80 ಲಕ್ಷ ರೂ. ಮೌಲ್ಯದ ಅಂದಾಜು 1ಕೆ.ಜಿಯಷ್ಟು ಚಿನ್ನಾಭರಣಗಳನ್ನು ಲೂಟಿಗೈದಿರುವ ಬಗ್ಗೆ ಪೊಲೀಸ್ ಮೂಲಗಳು ಈಗಾಗಲೇ ಧೃಡಪಡಿಸಿವೆ.
ಪ್ರಕರಣದ ಸಮಗ್ರ ಮಾಹಿತಿ ಹಾಗೂ ಆರೋಪಿಗಳ ಪತ್ತೆಗಾಗಿ ಮನೆಯ ಪರಿಸರದಲ್ಲಿ ಶೋಧಕಾರ್ಯ ನಡೆಸಲಾಗಿದ್ದು ಮನೆಗೆ ಸಂಬಂಧಿಸಿದ ವ್ಯಕ್ರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಮಧ್ಯೆ ಮನೆಯಲ್ಲಿ 8 ಹೈಬ್ರಿಡ್, 3 ಲೋಕಲ್ ತಳಿಯ ತರಬೇತಿ ಪಡೆದ ನಾಯಿಗಳಿದ್ದರೂ ಘಟನೆಯ ವೇಳೆ ಅವೆಲ್ಲವೂ ಬೋನಿನೊಳಗೆ ಬಂಧಿಯಾಗಿದ್ದವು ಎಂದು ಹೇಳಲಾಗಿದೆ.
ವಿಶೇಷ ತಂಡಗಳ ಶೋಧಕಾರ್ಯದಲ್ಲಿ ಪ್ರಕರಣ ಬೆಳಕಿಗೆ ಬಂದು 36 ಗಂಟೆಗಳ ಬಳಿಕವೂ ಯಾವುದೇ ಮಹತ್ವದ ಸುಳಿವು ಲಭ್ಯವಾಗದೇ ಇರುವುದು ವಿಪರ್ಯಾಸವೆನಿಸಿದೆ.