ಮಿತ್ರಪಕ್ಷಗಳ ಹಂಗಿನಲ್ಲಿದ್ದರೂ ದೇಶಕ್ಕೆ ಒಳಿತಾಗುವ ನಿರ್ಧಾರಗಳಿಂದ ಹಿಂದೆ ಸರಿಯುವುದಿಲ್ಲ ಎಂಬ ಸಂದೇಶ
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದುಕೊಳ್ಳಲು ಸಾಧ್ಯವಾಗದೆ ಮಿತ್ರಪಕ್ಷಗಳ ನೆರವಿನಿಂದ ಸರಕಾರ ರಚಿಸುವ ಅನಿವಾರ್ಯತೆಯಲ್ಲಿ ಸಿಲುಕಿದಾಗ ಈ ಅವಧಿಯಲ್ಲಿ ಬಿಜೆಪಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿಕ್ಕಿಲ್ಲ. ಎಲ್ಲ ವಿಚಾರಗಳಿಗೂ ಮಿತ್ರಪಕ್ಷಗಳ ಮನವೊಲಿಸಿ ಅಂಗಲಾಚಬೇಕಾಗಬಹುದು ಎಂಬ ಅಭಿಪ್ರಾಯವೊಂದು ಕೇಳಿಬಂದಿತ್ತು. ಆದರೆ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಯಶಸ್ವಿಯಾಗಿ ಅಂಗೀಕಾರಗೊಂಡಿರುವುದು ಈ ಅಭಿಪ್ರಾಯವನ್ನು ಸುಳ್ಳಾಗಿಸಿದೆ. ಪೂರ್ಣ ಬಹುಮತ ಇಲ್ಲದಿದ್ದರೂ ದೇಶಕ್ಕೆ ಒಳಿತಾಗುವ ದಿಟ್ಟ ನಿರ್ಧಾರ ಕೈಗೊಳ್ಳುವುದರಿಂದ ತನ್ನ ಸರಕಾರ ಹಿಂದೆಗೆಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ವಕ್ಫ್ ಮಸೂದೆಯ ಮೂಲಕ ಸಾರಿದ್ದಾರೆ.
ಬಿಜೆಪಿಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಸಿಕ್ಕಿರುವುದು 240 ಸ್ಥಾನ ಮಾತ್ರ. ಸರಳ ಬಹುಮತಕ್ಕೂ 32 ಸ್ಥಾನಗಳು ಕೊರತೆಯಾದ ಕಾರಣ ಬಿಜೆಪಿಗೆ ತನ್ನ ಮಿತ್ರರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಬೆಂಬಲ ಅನಿವಾರ್ಯವಾಗಿತ್ತು. ಮಿತ್ರಪಕ್ಷಗಳು ಸೇರಿದರೆ ಲೋಕಸಭೆಯಲ್ಲಿ ಬಿಜೆಪಿಗೆ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ 292 ಸ್ಥಾನ ಬಲವಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 232 ಸ್ಥಾನಗಳನ್ನು ಹೊಂದಿದೆ.
ಮಿತ್ರಪಕ್ಷಗಳ ಪೈಕಿ ಯಾರಾದರೊಬ್ಬರು ಮಸೂದೆಯ ವಿರುದ್ಧ ಒಡಕಿನ ಧ್ವನಿ ಎತ್ತಿ ಹಿಂದೆ ಸರಿದಿದ್ದರೆ ಮಸೂದೆ ವಿಫಲಗೊಳ್ಳುವುದು ಮಾತ್ರವಲ್ಲದೆ ಸರಕಾರದ ಅಸ್ತಿತ್ವಕ್ಕೂ ಅಪಾಯ ಎದುರಾಗುವ ಸಾಧ್ಯತೆಯೂ ಇತ್ತು. ಮುಸ್ಲಿಂ ಮತಬ್ಯಾಂಕ್ ದೃಷ್ಟಿಯಲ್ಲಿಟ್ಟುಕೊಂಡಿರುವ ಯಾವುದಾದರೊಂದು ಎನ್‌ಡಿಎ ಮಿತ್ರಪಕ್ಷ ಹಿಂದೆ ಸರಿಯಬಹುದು ಎಂದು ಭಾವಿಸಲಾಗಿತ್ತು. ಆದರೆ ಇದು ಯಾವುದೂ ಸಂಭವಿಸದೆ ಐತಿಹಾಸಿಕ ಎನ್ನಬಹುದಾದ ಮಸೂದೆಯೊಂದು ಅಂಗೀಕಾರವಾಗಿದೆ. ಇನ್ನು ರಾಜ್ಯಸಭೆಯಲ್ಲೂ ಅಂಗೀಕಾರಗೊಂಡು ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ಕಾಯಿದೆಯಾಗಿ ಜಾರಿಗೆ ಬರಲಿದೆ. ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ ಇರುವುದರಿಂದ ಇಂದು ಮಸೂದೆ ಪಾಸ್ ಅಗುವ ನಿರೀಕ್ಷೆ ಇದೆ.
2019ರಲ್ಲಿ ನಿರೀಕ್ಷೆಗೂ ಮೀರಿ 303 ಸ್ಥಾನಗಳ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿಗೆ ಮಿತ್ರಪಕ್ಷಗಳ ಹಂಗು ಇರಲಿಲ್ಲ. ಹೀಗಾಗಿ ಹಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಿತ್ತು. ಈ ಸಲ ಇದೆಲ್ಲ ಸಾಧ್ಯವಿಲ್ಲ ಎಂಬ ಲೆಕ್ಕಾಚಾರಗಳೆಲ್ಲ ಬುಡಮೇಲಾಗಿದೆ. ಈಗಲೂ ಬಿಜೆಪಿ ತನ್ನ ದಿಟ್ಟತನವನ್ನು ತೋರಿಸಿದ್ದು, ಇದು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಸಾಮರ್ಥ್ಯ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ವ್ಯಾಖ್ಯಾನಿಸಲಾಗಿದೆ.
2019ರಲ್ಲಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಮೋದಿ ಸರ್ಕಾರ ತ್ರಿವಳಿ ತಲಾಖ್, 370ನೇ ವಿಧಿ ರದ್ದತಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸಿತ್ತು. ಈಗ 2024ರಲ್ಲಿ 240 ಸ್ಥಾನಗಳಿಗೆ ಇಳಿದರೂ ವಕ್ಫ್ ತಿದ್ದುಪಡಿ ಮಸೂದೆಯಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಸರ್ಕಾರ ಹಿಂಜರಿಯಲಿಲ್ಲ.
ವಕ್ಫ್ ತಿದ್ದುಪಡಿ ಮಸೂದೆಯ ಅಂಗೀಕಾರ ವಿರೋಧ ಪಕ್ಷಗಳ ಮುಸ್ಲಿಂ ಮತಬ್ಯಾಂಕ್ ರಾಜಕೀಯಕ್ಕೆ ಸವಾಲು ಹಾಕಿದೆ. ಮುಸ್ಲಿಂ ಸಮುದಾಯದ ಹಕ್ಕುಗಳ ರಕ್ಷಣೆಯ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ವಿರೋಧ ಪಕ್ಷಗಳ ತಂತ್ರವನ್ನು ಈ ಮಸೂದೆ ವಿಫಲಗೊಳಿಸಬಹುದು. ಸರ್ಕಾರ ಈ ಬದಲಾವಣೆಯನ್ನು ಮುಸ್ಲಿಮರ ಹಿತಾಸಕ್ತಿಗಾಗಿ ಮಾಡುತ್ತಿದೆ ಎಂದು ಸಾಬೀತುಪಡಿಸಿದ್ದು, ಭಯದ ಮೂಲಕ ರಾಜಕೀಯ ಆಟವಾಡುವ ವಿರೋಧ ಪಕ್ಷಗಳ ಯೋಜನೆಗೆ ತೊಡಕು ಉಂಟಾಗಿದೆ.
ನಿನ್ನೆ ನಡುರಾತ್ರಿಯವರೆಗೆ 12 ತಾಸು ಸುದೀರ್ಘವಾಗಿ ನಡೆದ ಮಸೂದೆ ಮೇಲಿನ ಚರ್ಚೆಯಲ್ಲಿ ಅಮಿತ್ ಶಾ, ಕಿರಣ್ ರಿಜಿಜು, ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ಸಚಿವರು ಮತ್ತು ಸಂಸದರು ಕಾಂಗ್ರೆಸ್ 2013ರಲ್ಲಿ ವಕ್ಫ್ ಮಸೂದೆಗೆ ಮಾಡಿದ್ದ ತಿದ್ದುಪಡಿಯಿಂದ ಆದ ಅನಾಹುತಗಳನ್ನು ವಿವರಿಸಿದ್ದು, ಈ ತಿದ್ದಪಡಿಯಿಂದಾಗಿ ಮುಸ್ಲಿಮರಿಗೆ ಹೇಗೆ ನಷ್ಟ ಉಂಟಾಗಿದೆ ಎಂದು ಸ್ಪಷ್ಟವಾಗಿ ಮನವರಿಕೆ ಮಾಡಿಕೊಟ್ಟಿದ್ದಾರೆ. ವಕ್ಫ್ ಕಾಯಿದೆಗೆ ತಿದ್ದಪಡಿ ಮಾಡಿರುವುದರ ಹಿಂದೆ ಮುಸ್ಲಿಮರ ಒಳಿತು ಅಡಗಿದೆ ಎಂದು ಸರಕಾರ ಸ್ಪಷ್ಟವಾಗಿ ಹೇಳಿದೆ.
ವಿರೋಧ ಪಕ್ಷಗಳು ಈ ಮಸೂದೆಯನ್ನು ಮುಸ್ಲಿಂ ವಿರೋಧಿ ಎಂದು ಚಿತ್ರಿಸಲು ಪ್ರಯತ್ನಿಸಿದರೂ ಅದು ಲೋಕಸಭೆಯಲ್ಲಿ ಅಂಗೀಕೃತವಾಗಿರುವುದರಿಂದ ಅವರಿಗೆ ಹಿನ್ನಡೆಯಾಗಿದೆ. ಇದು ಅವರ ರಾಜಕೀಯ ತಂತ್ರವನ್ನು ದುರ್ಬಲಗೊಳಿಸಿದೆ.