ಕೋಟಿಗಟ್ಟಲೆ ಸಂಪಾದಿಸುವ ಕ್ರಿಕೆಟ್ ಆಟಗಾರನ ಕುಟುಂಬದವರ ಸ್ಥಿತಿ ಹೀಗಿದೆ ನೋಡಿ
ಹೊಸದಿಲ್ಲಿ : ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಕ್ರಿಕೆಟ್ ಮತ್ತು ಜಾಹೀರಾತು ಮೂಲಗಳಿಂದ ಕೋಟಿಗಟ್ಟಲೆ ಹಣ ಗಳಿಸಿರಬಹುದು. ಆದರೆ ಸರಕಾರಿ ದಾಖಲೆಗಳ ಪ್ರಕಾರ ಅವರ ಅಕ್ಕ, ಬಾವ, ಸೇರಿ ಕೆಲವು ಸಂಬಂಧಿಕರು ಮಾತ್ರ ನರೇಗಾದಡಿ ಕೂಲಿ ಕೆಲಸ ಮಾಡುವ ಕಾರ್ಮಿಕರು! ಮೊಹಮ್ಮದ್ ಶಮಿಯ ಸಹೋದರಿ ಮತ್ತು ಭಾವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ನರೇಗಾ) ಯೋಜನೆಯಲ್ಲಿ ವಂಚನೆ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಟ್ಟಾರೆ 18 ಮಂದಿ ವಿರುದ್ಧ ಅಕ್ರಮವಾಗಿ ಹಣ ಪಡೆದ ಆರೋಪ ಹೊರಿಸಲಾಗಿದೆ.
ಮೊಹಮ್ಮದ್ ಶಮಿ ಅವರ ಕುಟುಂಬ ಸದಸ್ಯರು ಕಳೆದ ನಾಲ್ಕು ವರ್ಷಗಳಿಂದ ಕಾರ್ಮಿಕರಾಗಿ ನೋಂದಾಯಿಸಲ್ಪಟ್ಟಿದ್ದು, ಅಕ್ರಮವಾಗಿ ಸರ್ಕಾರಿ ವೇತನವನ್ನು ಪಡೆದಿದ್ದಾರೆ. ಮೊಹಮ್ಮದ್ ಶಮಿ ಅವರ ಅಕ್ಕ ಶಬಿನಾ, ಅವರ ಪತಿ ಘಜ್ನವಿ, ಶಬಿನಾ ಅವರ ಮೂವರು ಸೋದರಳಿಯರಾದ ಆಮಿರ್ ಸುಹೈಲ್, ನಸೀರುದ್ದೀನ್ ಮತ್ತು ಶೇಖು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ನರೇಗಾ ಹಣ ವಿತರಣೆಯಲ್ಲಿ ವಂಚನೆ ನಡೆದಿರುವುದು ಆರಂಭಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲಾಧಿಕಾರಿ ನಿಧಿ ಗುಪ್ತಾ ವತ್ಸ್ ತಿಳಿಸಿದ್ದಾರೆ. ಇದರಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಕಾರ್ಮಿಕರನ್ನು ಅಮಾನತುಗೊಳಿಸಲು ಆದೇಶ ಹೊರಡಿಸಲಾಗಿದೆ. ಇದರೊಂದಿಗೆ ಪಂಚಾಯತ್ ರಾಜ್ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪೊಲೀಸ್ ದೂರು ಕೂಡ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಜೋಯಾ ಬ್ಲಾಕ್‌ನಲ್ಲಿರುವ ಪಲೌಲಾ ಗ್ರಾಮದ ಮುಖ್ಯಸ್ಥೆಯಾಗಿರುವ ಗುಳೆ ಆಯೇಷಾ ಮೊಹಮ್ಮದ್ ಶಮಿ ಅವರ ಸಹೋದರಿಯ ಅತ್ತೆ. ಈ ಇಡೀ ಹಗರಣದ ಮಾಸ್ಟರ್ ಮೈಂಡ್ ಕೂಡ ಅವರೇ. ತಮ್ಮ ಕುಟುಂಬಸ್ಥರ ಹೆಸರುಗಳನ್ನು ಬಳಸಿ ನರೇಗಾ ಉದ್ಯೋಗ ಕಾರ್ಡ್‌ಗಳನ್ನು ಪಡೆದುಕೊಂಡಿದ್ದರು. ಅಲ್ಲದೆ ಕಳೆದ ಮೂರು ವರ್ಷಗಳಿಂದ ವೇತನ ಭತ್ಯೆ ಪಡೆದುಕೊಂಡಿರುವುದು ಇದೀಗ ಬೆಳಕಿಗೆ ಬಂದಿದೆ.
ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ, ಗ್ರಾಮದ ಮುಖ್ಯಸ್ಥರ ಖಾತೆಯನ್ನು ಸೀಜ್ ಮಾಡಿ ಹಣವನ್ನು ವಸೂಲಿ ಮಾಡಲು ಸೂಚಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾದ ಗ್ರಾಮದ ಮುಖ್ಯಸ್ಥರಲ್ಲದೆ, ಗ್ರಾಮ ಅಭಿವೃದ್ಧಿ ಅಧಿಕಾರಿ ಮತ್ತು ಸಹಾಯಕ ಕಾರ್ಯಕ್ರಮ ಅಧಿಕಾರಿ ವಿರುದ್ಧ ಕೂಡ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.