ಕದನ ವಿರಾಮ ಉಲ್ಲಂಘಿಸಿ ಗುಂಡು ಹಾರಿಸಿದ್ದ ಪಾಕ್ ಸೈನಿಕರು
ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ದಾಟಿ ಬರಲು ಯತ್ನಿಸಿದ ಐವರು ಪಾಕಿಸ್ಥಾನಿ ನುಸುಳುಕೋರರನ್ನು ಗಡಿ ಭದ್ರತಾ ಪಡೆಯವರು ಗುಂಡಿಕ್ಕಿ ಸಾಯಿಸಿದ್ದಾರೆ.
ಪೂಂಛ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಷನ್‌ನಲ್ಲಿ ಪಾಕ್ ಕಡೆಯಿಂದ ಕದನ ವಿರಾಮ ಉಲ್ಲಂಘಿಸಿ ಗಡಿದಾಟಲು ಯತ್ನಿಸಲಾಗಿತ್ತು. ಅವರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ್ದೇವೆ. 4-5 ಮಂದಿ ಸತ್ತಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ. ನಿನ್ನೆ ಬೆಳಗ್ಗಿನಿಂದ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯಿತ್ತು. ಅತ್ತ ಕಡೆಯಿಂದ ಪಾಕ್ ಸೈನಿಕರು ಗುಂಡು ಹಾರಿಸಿ ನುಸುಳುಕೋರರನ್ನು ಗಡಿ ದಾಟಿಸಲು ಯತ್ನಿಸಿದ್ದರು. ಭಾರತದ ಸೈನಿಕರು ಪ್ರತಿದಾಳಿ ನಡೆಸಿ ಅವರ ಪ್ರಯತ್ನವನ್ನು ವಿಫಲಗೊಳಿಸಿದ್ದು, ಪಾಕ್ ಕಡೆ ಅಪಾರ ಹಾನಿ ಸಂಭವಿಸಿದೆ.
ಕೆಲವ ತಿಂಗಳ ಬಳಿಕ ಇದೇ ಮೊದಲ ಸಲ ಪಾಕ್ ಸೇನೆ ಕದನ ವಿರಾಮ ಉಲ್ಲಂಘನೆ ಮಾಡಿ ನುಸುಳುಕೋರರನ್ನು ಗಡಿ ದಾಟಿಸಲು ಯತ್ನಿಸಿದೆ ಎಂದು ಸೇನೆಯ ಮೂಲಗಳು ಹೇಳಿವೆ.