ಆಡಿಯೋ ಬಹಿರಂಗವಾದ ಬಳಿಕ ತನಿಖೆ ಚುರುಕುಗೊಳಿಸಿದ ಪೊಲೀಸರು
ಬೆಂಗಳೂರು: ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದ ಆಡಿಯೋ ತುಣುಕೊಂದು ಬಹಿರಂಗವಾದ ಬೆನ್ನಿಗೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಆಡಿಯೋದಲ್ಲಿದ್ದ ಪುಷ್ಪಾ ಎಂಬ ಮಹಿಳೆಯ ಸಹಿತ ನಾಲ್ವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ಪಡೆದುಕೊಂಡಿದ್ದ ಎನ್ನಲಾದ ರೌಡಿಶೀಟರ್ ಸೋಮು ಎಂಬಾತನ ಕುರಿತು ರಾಕಿ ಹಾಗೂ ಪುಷ್ಪಾ ಎಂಬವರು ಮಾತುಕತೆ ನಡೆಸಿದ್ದ 18 ನಿಮಿಷದ ಸ್ಫೋಟಕ ಆಡಿಯೊ ನಿನ್ನೆ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ಸೋಮು ಮತ್ತು ಪುಷ್ಪಾ ಸೇರಿ 4 ಮಂದಿಯನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ.
ಪರಾರಿಯಾಗಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ ರೌಡಿ ಶೀಟರ್ ಸೋಮುನನ್ನು ನೆಲಮಂಗಲ ಬಳಿ ವಶಕ್ಕೆ ಪಡೆದಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜತೆಗೆ ಪುಷ್ಪಾಳನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ತುಮಕೂರಿನ ಉಪ್ಪಾರಹಳ್ಳಿಯಲ್ಲಿ ಹೋಟೆಲ್ ನಡೆಸುತ್ತಿದ್ದ ಪುಷ್ಪಾ ಮತ್ತು ಮತ್ತು ರಾಕಿ ಎಂಬವರ ಮಧ್ಯೆ ಡಿಸೆಂಬರ್ ತಿಂಗಳಿನಲ್ಲಿ ಶಾಸಕ ರಾಜೇಂದ್ರ ಹತ್ಯೆ ಸುಪಾರಿ ಕುರಿತಂತೆ ಸಂಭಾಷಣೆ ನಡೆದಿತ್ತು. ರಾಜೇಂದ್ರ ಹತ್ಯೆಗೆ ತುಮಕೂರು ಬಳಿಯ ಜೈಪುರದ ಸೋಮು ಎಂಬಾತ ಸುಪಾರಿ ಪಡೆದಿದ್ದ ಎನ್ನಲಾಗಿದೆ. ಆಡಿಯೋ ಸಂಭಾಷಣೆಯಲ್ಲಿ ಸೋಮುನ ಆಪ್ತೆಯಾಗಿರುವ ಪುಷ್ಪಾ, ಸೋಮುನ ಪ್ಲಾನ್ ಅನ್ನು ರಾಜೇಂದ್ರ ಅವರ ಬೆಂಬಲಿಗ ರಾಕಿಗೆ ಫೋನ್‌ನಲ್ಲಿ ತಿಳಿಸಿದ್ದಳು. ಅದನ್ನು ರೆಕಾರ್ಡ್ ಮಾಡಿಕೊಂಡಿದ್ದ ರಾಕಿ ಈ ಸಂಭಾಷಣೆ ಆಡಿಯೋವನ್ನು ರಾಜೇಂದ್ರಗೆ ನೀಡಿದ್ದ. ಇದೇ ಆಡಿಯೋದ ಪೆನ್‌ಡ್ರೈವ್ ದೂರಿನ ವೇಳೆ ಪೊಲೀಸರಿಗೆ ರಾಜೇಂದ್ರ ನೀಡಿದ್ದರು.
ಎಂಎಲ್ಸಿ ರಾಜೇಂದ್ರ ಬೆಂಬಲಿಗ ರಾಕಿ ಹಾಗೂ ಪುಷ್ಪಾ ನಡುವಿನ 18 ನಿಮಿಷದ ಆಡಿಯೋ ಸಂಭಾಷಣೆ ಬಹಿರಂಗಗೊಂಡಿದೆ. ಅದರಲ್ಲಿ ಪುಷ್ಪಾ ಎಂಬಾಕೆ ಮಾತನಾಡಿ, ರಾಜೇಂದ್ರ ಅವರ ಕೊಲೆ ಸುಪಾರಿಗೆ ಸೋಮು ಎಂಬಾತನಿಗೆ 5 ಲಕ್ಷ ರೂ. ಬಂದಿದ್ದು ನಿಜ. ಬೇಕಾದರೆ ಸೋಮನನ್ನು ಪೊಲೀಸರು ವಿಚಾರಿಸಿದರೆ ಎಲ್ಲ ಹೊರಬರುತ್ತದೆ. ಈ ವಿಚಾರವನ್ನು ಬೇಕಾದರೆ ರಾಜೇಂದ್ರಗೆ ನಾನು ಹೇಳುತ್ತೇನೆ. ಅವರ ಬಳಿ ನನ್ನ ಕರೆದುಕೊಂಡು ಹೋಗು ಎಂದು ರಾಕಿಗೆ ಫೋನಿನಲ್ಲಿ ತಿಳಿಸಿದ್ದಾಳೆ. ಕಳೆದ ನವೆಂಬರ್ ತಿಂಗಳಿನಲ್ಲಿ ರಾಜೇಂದ್ರ ಅವರ ಪುತ್ರಿಯ ಹುಟ್ಟುಹಬ್ಬ ಸಮಾರಂಭದಲ್ಲಿ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರು ಹುಡುಗರನ್ನು ಕಳುಹಿಸಿದ್ದು ಕೂಡ ಸೋಮು ಎಂದು ಪುಷ್ಪಾ ಹೇಳಿದ್ದಾಳೆ.