15,000ಕ್ಕೂ ಅಧಿಕ ಮಕ್ಕಳನ್ನು ಬಲಿತೆಗೆದುಕೊಂಡ 18 ತಿಂಗಳ ಯುದ್ಧ
ಗಾಜಾ: ಕದನ ವಿರಾಮ ಒಪ್ಪಂದ ಆದ ಬಳಿಕ ಪ್ಯಾಲೆಸ್ತೀನ್ ಮೇಲೆ ಇಸ್ರೇಲ್ ನಡೆಸಿದ ಎರಡನೇ ಸುತ್ತಿನ ದಾಳಿಯಲ್ಲಿ 300ಕ್ಕೂ ಅಧಿಕ ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಯುನಿಸೆಫ್ ವರದಿ ತಿಳಿಸಿದೆ. ಗಾಜಾದ ಪ್ಯಾಲೆಸ್ತೀಯನ್ ಪ್ರದೇಶದಲ್ಲಿ ಕಳೆದ 10 ದಿನಗಳಲ್ಲಿ 322 ಮಕ್ಕಳು ಸಾವನ್ನಪ್ಪಿದ್ದಾರೆ. 609 ಮಕ್ಕಳು ಗಾಯಗೊಂಡಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.
ಮಾ.23ರಂದು ದಕ್ಷಿಣ ಗಾಜಾದಲ್ಲಿರುವ ಅಲ್ ನಾಸರ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ, ಗಾಯಗೊಂಡ ಮಕ್ಕಳೂ ಈ ಅಂಕಿಅಂಶಗಳಲ್ಲಿ ಸೇರಿದ್ದಾರೆ.ಈ ಮಕ್ಕಳಲ್ಲಿ ಹೆಚ್ಚಿನವರು ಸ್ಥಳಾಂತರಗೊಂಡು ತಾತ್ಕಾಲಿಕ ಡೇರೆಗಳು, ಹಾನಿಗೊಳಗಾದ ಮನೆಗಳಲ್ಲಿ ಆಶ್ರಯ ಪಡೆದಿದವರು ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಮಾಹಿತಿ ನೀಡಿದೆ.
ಹಮಾಸ್ ಜೊತೆಗಿನ ಸುಮಾರು ಎರಡು ತಿಂಗಳ ಯುದ್ಧ ವಿರಾಮವನ್ನು ಕೊನೆಗೊಳಿಸಿದ ಇಸ್ರೇಲ್, ಮಾ.18ರಂದು ಗಾಜಾದ ಮೇಲೆ ತೀವ್ರವಾದ ಬಾಂಬ್ ದಾಳಿಯನ್ನು ಪುನರಾರಂಭಿಸಿದೆ. ಸುಮಾರು 18 ತಿಂಗಳ ಯುದ್ಧದಲ್ಲಿ 15,000ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. 34,000ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.