ಪಟಾಕಿಯ ಕಿಡಿ ತಗಲಿ ಸ್ಫೋಟಿಸಿದ ಸಿಲಿಂಡರ್
ಕೋಲ್ಕತ್ತಾ : ಪಶ್ಚಿಮ ಬಂಗಾಳದ ದಕ್ಷಿಣ ಪರಗಣ ಜಿಲ್ಲೆಯ ದೋಲಾಹಾತ್ ಎಂಬಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಮಕ್ಕಳು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ. ಪಟಾಕಿ ಯಿಂದ ಸಿಡಿದ ಕಿಡಿ ಸಿಲಿಂಡರ್‌ಗೆ ತಗಲಿ ಬೆಂಕಿಹತ್ತಿಕೊಂಡು ಸ್ಫೋಟಗೊಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಕಟ್ಟಡ ಬೆಂಕಿಗಾಹುತಿಯಾಗಿದೆ.
ಬೆಂಕಿ ಅವಘಡದ ಬಳಿಕ ನಾಲ್ವರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಮನೆಯಲ್ಲಿ ಪಟಾಕಿ ತಯಾರಿಸಲಾಗುತ್ತಿತ್ತು, ಈ ವೇಳೆ ಕಿಡಿ ಸಿಡಿದು ಸಿಲಿಂಡರ್‌ಗೆ ತಗಲಿದೆ. ದೊಡ್ಡ ಸ್ಫೋಟದ ಸದ್ದು ಕೇಳಿಬಂದಿದ್ದು, ನಂತರ ಬೆಂಕಿ ಕಟ್ಟಡವನ್ನು ಆವರಿಸಿಕೊಂಡಿದೆ.
ಈ ಕುಟುಂಬ ವರ್ಷಗಳಿಂದ ಪಟಾಕಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ವರದಿಗಳ ಪ್ರಕಾರ, ಒಟ್ಟು 11 ಸದಸ್ಯರು ಮನೆಯಲ್ಲಿ ವಾಸಿಸುತ್ತಿದ್ದರು. ಅದರಲ್ಲಿ 4 ಸದಸ್ಯರು ಇನ್ನೂ ಕಾಣೆಯಾಗಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಸಿಲಿಂಡರ್ ಸ್ಫೋಟದಿಂದ ಬೆಂಕಿ ಕಾಣಿಸಿಕೊಂಡಿದ್ದು, ಏಳು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದಾರೆ. ಕಳೆದ ತಿಂಗಳು ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರು.