ಇಂದಿನಿಂದ ಬೆಲೆ ಏರಿಕೆ ಬಿಸಿ : ಜನಸಾಮಾನ್ಯರ ಪಾಲಿಗೆ ಬದುಕು ಬಲು ದುಬಾರಿ

ಹಾಲು, ಮೊಸರು, ವಿದ್ಯುತ್‌, ಟೋಲ್‌…ಹೆಚ್ಚಳ ಇಂದಿನಿಂದ ಜಾರಿ

ಬೆಂಗಳೂರು : ಇಂದಿನಿಂದಲೇ ಕರ್ನಾಟಕದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಹಾಲು, ಮೊಸರು, ವಿದ್ಯುತ್‌, ಟೋಲ್‌…ಹೀಗೆ ಅನೇಕ ವಸ್ತು ಮತ್ತು ಸೇವೆಗಳ ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದ್ದು, ಜನಸಾಮಾನ್ಯರ ಜೇಬಿಗೆ ಹೊರೆ ಬೀಳಲಿದೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಕಸ ಸಂಗ್ರಹ ಸೆಸ್ ಕೂಡ ಜಾರಿಯಾಗುತ್ತಿದೆ.
ಇಂದಿನಿಂದ ನಂದಿನಿ ಹಾಲಿನ ಎಲ್ಲ ಮಾದರಿಯ ಪ್ಯಾಕೆಟ್​ ದರ ಪ್ರತಿ ಲೀಟರ್​ಗೆ 4 ರೂಪಾಯಿ ಏರಿಕೆಯಾಗಿದೆ. ಜೊತೆಗೆ ಮೊಸರಿನ ದರವೂ ಪ್ರತಿ ಲೀಟರ್​​ಗೆ 4 ರೂಪಾಯಿ ಏರಿಕೆಯಾಗಿದೆ. ವಿದ್ಯುತ್‌ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳವಾಗಲಿದೆ. ಇದರ ಜೊತೆಗೆ ಮಾಸಿಕ ಶುಲ್ಕವೂ 20 ರೂ. ಹೆಚ್ಚಳವಾಗುತ್ತಿದೆ. ಇದರಿಂದ 120 ರೂಪಾಯಿ ಇದ್ದ ನಿಗದಿತ ಶುಲ್ಕ 140 ರೂಪಾಯಿಗೆ ಏರಿಕೆಯಾಗಲಿದೆ. ಗೃಹಜ್ಯೋತಿ ಬಳಕೆದಾರರು 200 ಯೂನಿಟ್ ದಾಟಿದರೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಬೆಂಗಳೂರಿನ ಜನರಿಗೆ ಕಸದ ಸಂಗ್ರಹದ ಸೆಸ್​ ಹೆಚ್ಚಳ ಮಾಡಿರುವುದು ಶಾಕ್ ಕೊಡಲಿದೆ. ವಸತಿ ಕಟ್ಟಡಗಳಿಗೆ 600 ಚದರಡಿವರೆಗೆ 10 ರೂಪಾಯಿ ಸೆಸ್ ಇರಲಿದ್ದು, 601ರಿಂದ ಸಾವಿರ ಚದರಡಿವರೆಗೆ 50 ರೂಪಾಯಿ ಇರಲಿದೆ. 1001ರಿಂದ 2 ಸಾವಿರ ಚದರಡಿವರೆಗೂ 100 ರೂಪಾಯಿ, 2001ರಿಂದ 3000 ಚದರಡಿವರೆಗೂ 150 ರೂಪಾಯಿ, 3001-4000 ಚದರಡಿ 200 ರೂಪಾಯಿ ಇರಲಿದೆ. 4000 ಚದರಡಿ ಮೇಲ್ಪಟ್ಟು ಇದ್ರೆ, 400 ರೂ.ಕಸದ ಸೆಸ್ ಕೊಡಬೇಕಾಗುತ್ತದೆ.
ವಾಣಿಜ್ಯ ಕಟ್ಟಡದಲ್ಲಿ ನಿತ್ಯ 5 ಕೆಜಿ ಕಸ ಸಂಗ್ರಹ ಮಾಡಿದರೆ 500 ರೂಪಾಯಿ ಕೊಡಬೇಕಾಗುತ್ತದೆ. 10 ಕೆಜಿ ಕಸಕ್ಕೆ 1,400 ರೂ., 25 ಕೆಜಿ ಕಸಕ್ಕೆ 3,500 ರೂಪಾಯಿ, ನಿತ್ಯ 50 ಕೆಜಿ ಕಸ ಇದ್ರೆ 7,000 ರೂ.ಸೆಸ್‌ ಪಾವತಿಸಬೇಕು. 100 ಕೆಜಿ ಕಸಕ್ಕೆ ಭರ್ತಿ 14 ಸಾವಿರ ರೂ.ತೆರಬೇಕು.
ಉಕ್ಕು, ವಾಹನಗಳ ಬಿಡಿಭಾಗಳ ಆಮದು, ಉಕ್ಕುಗಳ ಆಮದು ದರ ಹೆಚ್ಚಾಗುತ್ತಿದೆ. ಇದರ ಪರಿಣಾಮ ಇಂದಿನಿಂದ ಹೊಸ ವಾಹನ ಖರೀದಿಸಿದರೆ ಬೆಲೆ ಹೆಚ್ಚು ತೆರಬೇಕಾಗುತ್ತದೆ.
ಮುದ್ರಾಂಕ ಶುಲ್ಕ 50 ರೂಪಾಯಿಯಿಂದ 500 ರೂಪಾಯಿಗೆ ಏರಿಕೆ ಆಗಲಿದ್ದು, ಅಫಿಡವಿಟ್ ಶುಲ್ಕ 20 ರೂಪಾಯಿಯಿಂದ 100 ರೂಪಾಯಿಗೆ ಏರಿಕೆ ಆಗುತ್ತಿದೆ.
ಹೆದ್ದಾರಿ ಪ್ರಾಧಿಕಾರ ಟೋಲ್ ದರವನ್ನು ಶೇಕಡಾ 3ರಿಂದ 5ರಷ್ಟು ಹೆಚ್ಚಳ ಮಾಡುತ್ತಿದ್ದು, ಇಂದಿನಿಂದಲೇ ಜಾರಿಗೆ ಬರುತ್ತಿದೆ. ರಾಜ್ಯದ ಒಟ್ಟು 66 ಟೋಲ್​ ಪ್ಲಾಜಾಗಳ ದರ ಏರಿಕೆಯಾಗಲಿದೆ.
ಈ ಮಧ್ಯೆ ಇಂಧನ ಇಲಾಖೆಯ ಡಿಪಾರ್ಟ್​ಮೆಂಟ್ ಆಫ್ ಎಲೆಕ್ಟ್ರಿಲ್ ಇನ್ಸ್​ಪೆಕ್ಟೋರೇಟ್ ಲಿಫ್ಟ್​ ಪರಿಶೀಲನೆ ಮತ್ತು ರಿನಿವಲ್ ಹಾಗೂ ಟ್ರಾನ್ಸ್​ಫಾರ್ಮರ್ ಪರಿಶೀಲನೆ ಮತ್ತು ರಿನಿವಲ್ ಮಾಡುವ ಶುಲ್ಕವನ್ನು ದುಪ್ಪಟ್ಟು ಮಾಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top