ಏ.9ರಂದು ಮಂಗಳೂರು, 10ರಂದು ಉಡುಪಿಯಲ್ಲಿ ಜನಾಕ್ರೋಶ ಹೋರಾಟ
ಬೆಂಗಳೂರು : ಬೆಲೆಯೇರಿಕೆ ಖಂಡಿಸಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ನಡೆಸಲು ಬಿಜೆಪಿ ಮುಂದಾಗಿದ್ದು, ಏಪ್ರಿಲ್ 2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ನಡೆಸುವುದರೊಂದಿಗೆ ಬಿಜೆಪಿಯ ಹೋರಾಟ ಪ್ರಾರಂಭವಾಗಲಿದೆ.
ಏಪ್ರಿಲ್ 2ರಿಂದ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ನಮ್ಮ ಪಕ್ಷದ ಶಾಸಕರು, ಸಂಸದರು, ಪರಾಜಿತ ಅಭ್ಯರ್ಥಿಗಳು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಅಹೋರಾತ್ರಿ ಧರಣಿಯಲ್ಲಿ ಭಾಗಿಯಾಗುತ್ತಾರೆ. ಏಪ್ರಿಲ್ 5ರಂದು ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಧರಣಿ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಾಲ್ಕು ಹಂತಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಹೋರಾಟ ನಡೆಸುತ್ತೇವೆ. ಏಪ್ರಿಲ್ 7ರಂದು ಮೈಸೂರಿನಿಂದ ಜನಜಾಗೃತಿ ಹೋರಾಟ ಪ್ರಾರಂಭವಾಗುತ್ತದೆ. ಜನಾಕ್ರೋಶ ಹೋರಾಟಕ್ಕೆ ಮಧ್ಯಾಹ್ನ 3 ಗಂಟೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡುತ್ತಾರೆ. ಏ.7ರಂದು ಮೈಸೂರು, ಚಾಮರಾಜನಗರದಲ್ಲಿ ಜನಜಾಗೃತಿ ಹೋರಾಟ ನಡೆಯಲಿದ್ದು, ಏಪ್ರಿಲ್ 8ರಂದು ಮಂಡ್ಯ, ಹಾಸನದಲ್ಲಿ ನಡೆಯಲಿದೆ. ಏಪ್ರಿಲ್ 9ರಂದು ಕೊಡಗು, ಮಂಗಳೂರಿನಲ್ಲಿ ಜನಾಕ್ರೋಶ ಹೋರಾಟ ನಡೆಯಲಿದೆ. ಏಪ್ರಿಲ್ 10ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಎರಡನೇ ಹಂತದ ಹೋರಾಟ ಏಪ್ರಿಲ್ 13ರಿಂದ ಆರಂಭವಾಗಲಿದೆ. ಏಪ್ರಿಲ್ 13ರಂದು ಶಿವಮೊಗ್ಗ, ಕಾರವಾರದಲ್ಲಿ ಜನಾಕ್ರೋಶ ಹೋರಾಟ ನಡೆಯಲಿದೆ. ಪ್ರತಿ ಜಿಲ್ಲೆಯಲ್ಲಿ 2-3 ಕಿ.ಮೀ. ಪಾದಯಾತ್ರೆ, ಸಭೆಗಳನ್ನು ಮಾಡುತ್ತೇವೆ. ಈ ಜನಾಕ್ರೋಶ ಯಾತ್ರೆಯನ್ನು ಬಿಜೆಪಿ ಮಾತ್ರ ಕೈಗೆತ್ತಿಕೊಂಡಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲ ವಸ್ತುಗಳ ಬೆಲೆ ಹೆಚ್ಚಿಸುತ್ತಿದೆ. ಕಾಂಗ್ರೆಸ್ ಸರ್ಕಾರ ದುಬಾರಿ ಜೀವನ ನಡೆಸುವ ದುಸ್ಥಿತಿ ನಿರ್ಮಿಸಿದೆ. ದೇಶದಲ್ಲೇ ಅತ್ಯಂತ ದುಬಾರಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಿಸಿದೆ. ಗಾಳಿ ಹೊರತುಪಡಿಸಿ ಉಳಿದೆಲ್ಲ ವಸ್ತುಗಳ ದರ ಏರಿಕೆ ಮಾಡುತ್ತಿದ್ದಾರೆ. ಮತದಾರರಿಗೆ ವರದಾನವಾಗುವ ಬದಲು ಸರ್ಕಾರ ಶಾಪವಾಗಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಶುಲ್ಕ ಹೆಚ್ಚಳವಾಗಿದೆ ಎಂದು ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.