ಆಡಿಯೊ ಕ್ಲಿಪ್ಪಿಂಗ್‌ನಿಂದ ಬಯಲಾಯಿತು ಸುಪಾರಿ ಹಿಂದಿನ ಮರ್ಮ
ಬೆಂಗಳೂರು: ಸಚಿವ ಕೆ.ಎನ್ ರಾಜಣ್ಣ ಅವರ ಪುತ್ರ, ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಅವರ ಮಗಳ ಬರ್ತ್‌ಡೇ ದಿನವೇ ಯತ್ನಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ತನ್ನ ಹತ್ಯಾಯತ್ನದ ಬಗ್ಗೆ ರಾಜೇಂದ್ರ ಅವರೇ ದೂರಿನ ಜೊತೆಗೆ ನೀಡಿದ್ದ ಆಡಿಯೊ ಕ್ಲಿಪ್ಪಿಂಗ್ ಈಗ ಬಯಲಾಗಿದ್ದು, ಇದರಲ್ಲಿ ಪುಷ್ಪಾ ಎಂದು ಹೇಳಿಕೊಂಡಿರುವ ಮಹಿಳೆ ರಾಕಿ ಎಂಬಾತನಿಗೆ ರಾಜೇಂದ್ರ ಅವರ ಹತ್ಯೆಯ ಪ್ಲ್ಯಾನ್ ವಿವರಿಸಿದ ಸಂಭಾಷಣೆಯಿದೆ.
ರಾಜೇಂದ್ರ ತುಮಕೂರು ಎಸ್ಪಿಗೆ ನೀಡಿದ ಆಡಿಯೋದಲ್ಲಿ ಸುಪಾರಿ ಸಂಚಿನ ಇಂಚಿಂಚೂ ಮಾಹಿತಿ ಬಯಲಾಗಿದೆ. ತನ್ನ ಹತ್ಯೆಗೆ ಸುಪಾರಿ ನೀಡಿದ್ದ ವಿಚಾರ ರಾಜೇಂದ್ರ ರಾಜಣ್ಣ ಅವರಿಗೆ ತಿಳಿದಿದ್ದು ಸಹ ಇದೇ ಆಡಿಯೊದಿಂದ ಎಂಬುದು ಗೊತ್ತಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಪುಷ್ಪಾ ಹಾಗೂ ರಾಕಿ ಎನ್ನುವವರ ನಡುವೆ ಸಂಭಾಷಣೆ ನಡೆದಿತ್ತು. ಹತ್ಯಾ ಸುಪಾರಿ ಬಗ್ಗೆ ಪ್ರಮುಖ ಆರೋಪಿ ಸೋಮನ ಪ್ಲ್ಯಾನ್ ಬಗ್ಗೆ ಪುಷ್ಪಾ ಎನ್ನುವ ಮಹಿಳೆ ರಾಕಿಗೆ ಇಂಚಿಂಚೂ ಮಾಹಿತಿ ನೀಡಿದ್ದಾಳೆ. ಕಳೆದ ನವೆಂಬರ್‌ನಲ್ಲಿ ರಾಜೇಂದ್ರ ಅವರ ಮಗಳ ಬರ್ತ್‌ಡೇ ಡೆಕೋರೇಷನ್‌ಗೆ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರನ್ನೂ ಸೋಮ ಕಳುಹಿಸಿದ್ದ, ಆಗಲೇ ಹತ್ಯೆಗೆ ಯತ್ನ ನಡೆದಿತ್ತು ಎಂದು ಪುಷ್ಪಾ ಮಾಹಿತಿ ನೀಡಿದ್ದಾಳೆ. ಸೋಮನಿಗೆ 5 ಲಕ್ಷ ರೂ. ಬಂದಿರೋದು ಸತ್ಯ. ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ರೆ ಎಲ್ಲ ಗೊತ್ತಾಗುತ್ತೆ. ರಾಜೆಂದ್ರ ಅವರ ಮುಂದೆ ನಾನೇ ಹೇಳ್ತೀನಿ, ನನ್ನ ಕರೆದುಕೊಂಡು ಹೋಗು ಅಂತ ರಾಕಿ ಎನ್ನುವವನೊಂದಿಗೆ ಪುಷ್ಪಾ ಹೇಳಿಕೊಂಡಿದ್ದಾಳೆ. ಜೊತೆಗೆ ಜೈಪುರದ ಮತ್ತೋರ್ವ ರೌಡಿಶೀಟರ್ ಪ್ರಸಿಯನ್ನೂ ಮರ್ಡರ್ ಮಾಡೋದಾಗಿ ಸೋಮ ಹೇಳಿದ್ದಾನೆ. ಅದಕ್ಕಾಗಿ ಬೆಂಗಳೂರಿನ ಕಲಾಸಿಪಾಳ್ಯದಿಂದ ಇಬ್ಬರು ತಮಿಳು ಹುಡುಗರನ್ನ ಸೋಮ ಕರೆಸಿಕೊಳ್ತಿದ್ದಾನೆ. ಜೈಲಿನಲ್ಲಿರುವ ಸ್ಟೀಫನ್ ಗುಂಡನನ್ನ ಪೆರೋಲ್ ಮೇಲೆ ಕರೆದುಕೊಂಡು ಬರಲು ಸೋಮ ಪ್ಲಾನ್ ಮಾಡಿದ್ದಾನೆ. ಅವನನ್ನ ಕರೆಸಿ ನೆಟ್‌ವರ್ಕ್ ಇಲ್ಲದೆ ಇರೋ ಜಾಗದಲ್ಲಿ ಇಡೋಕೆ ಮನೆ ಮಾಡ್ತಿದ್ದಾನೆ ಈ ಬಗ್ಗೆಯೂ ಆಡಿಯೋನಲ್ಲಿ ಪುಷ್ಪಾ ಎನ್ನುವ ಮಹಿಳೆ ಮಾಹಿತಿ ನೀಡಿದ್ದಾಳೆ.
ರಾಜೇಂದ್ರರನ್ನ ಹತ್ಯೆ ಮಾಡಲು ತಾನು ಸುಪಾರಿ ಪಡೆದಿರುವುದಾಗಿ ಪುಷ್ಪಾಳ ಬಳಿ ಸೋಮ ಹೇಳಿಕೊಂಡಿದ್ದಾನೆ. ಆ ಬಳಿಕವೇ ಪುಷ್ಪಾ ಸುಪಾರಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಳು. ಸೋಮನ ಜೊತೆಗಿದ್ದುಕೊಂಡೇ ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದಳು, ಬಳಿಕ ಈ ವಿಚಾರವನ್ನು ರಾಜೇಂದ್ರ ಅವರಿಗೆ ತಿಳಿಸಲು ಪುಷ್ಪಾ ಮುಂದಾಗಿದ್ದಾಳೆ. ರಾಜೇಂದ್ರ ಅವರಿಗೆ ವಿಷಯ ತಿಳಿಸಲು ರಾಕಿ ಎನ್ನುವ ಹುಡುಗನ್ನ ಬಳಸಿಕೊಂಡಿದ್ದಾಳೆ. ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನ ರಾಕಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ರಾಜೇಂದ್ರ ಅವರಿಗೆ ಈ ಆಡಿಯೊ ತಲುಪಿಸಿಲಾಗಿತ್ತು. ಆಡಿಯೊ ಕೇಳಿದ ಅಲರ್ಟ್ ಆಗಿ ತುಮಕೂರು ಎಸ್ಪಿ ಬಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಈಗ ಈ ಪುಷ್ಪಾ ಮತ್ತು ರಾಕಿ ಯಾರು ಎನ್ನುವುದನ್ನು ಪತ್ತೆಹಚ್ಚಲು ತನಿಖೆ ಮಾಡುತ್ತಿದ್ದಾರೆ.