ಸುಳ್ಯ: ಅಮರ ಸುಳ್ಯ ಹೆರಿಟೇಜ್ ಫೌಂಡೇಷನ್, ಬೆಳ್ಳಾರೆ ಗ್ರಾಮ ಪಂಚಾಯತ್, ಬೆಳ್ಳಾರೆ ಸ್ನೇಹಿತರ ಕಲಾ ಸಂಘ ಮತ್ತು ಬೆಳ್ಳಾರೆ ಅಕ್ಷಯ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ನಡೆದ ‘ಅಮರ ಸುಳ್ಯ ವಿಜಯ ಸ್ಮರಣೆ ದಿನ’ ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ, ಅಮರ ಸುಳ್ಯದ ಸ್ವಾತಂತ್ರ್ಯ ಹೋರಾಟವು ನಮ್ಮೂರಿನ ಪ್ರತಿಷ್ಠೆಯ ಸಂಕೇತವಾಗಿದೆ. ಈ ಹೋರಾಟ ಆರಂಭವಾದ ಬೆಳ್ಳಾರೆಯ ಬಂಗ್ಲೆಗುಡ್ಡೆಯನ್ನು ಒಂದು ಐತಿಹಾಸಿಕ ಸ್ಮಾರಕವಾಗಿಸಲು ನಾನು ಸರಕಾರದ ಪ್ರತಿನಿಧಿಯಾಗಿ ಎಲ್ಲಾ ಪ್ರಯತ್ನವನ್ನು ಮಾಡಿ ಗರಿಷ್ಠ ಅನುದಾನ ತರಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಸೀತಾರಾಮ ಕೇವಳ ಪ್ರದಾನ ಭಾಷಣ ಮಾಡಿ, ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಆರಂಭವಾದುದೇ ಬೆಳ್ಳಾರೆಯಲ್ಲಿ. ಈ ಅನನ್ಯ ಐತಿಹಾಸಿಕ ಸತ್ಯ ಮುಂದಿನ ಪೀಳಿಗೆಗೆ ತಿಳಿಯಬೇಕಿದೆ ಎಂದು ಅವರು ಪ್ರತಿಪಾದಿಸಿದರು. ದೇಶಕ್ಕಾಗಿ ನಾನು ಎಂಬುದು ಅಮರ ಸುಳ್ಯ ಹೋರಾಟದಲ್ಲಿ ಪಾಲ್ಗೊಂಡವರ ಮೂಲಕ ಸಾಬೀತಾಗಿದೆ. ಅಂತಹವರ ತ್ಯಾಗ, ಬಳಿದಾನಗಳಿಗೆ ಗೌರವ ನೀಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಆರಂಭದಲ್ಲಿ ಐತಿಹಾಸಿಕ ಬಂಗ್ಲೆ ಗುಡ್ಡೆಯ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣಗೈದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್. ರೈ ಮಾತನಾಡಿ, ಬೆಳ್ಳಾರೆಯ ಈ ಐತಿಹಾಸಿಕ ಜಾಗದ ಸರ್ವತೋಮುಖ ಬೆಳವಣಿಗೆಗೆ ಪಂಚಾಯತ್ ವತಿಯಿಂದ ಪೂರ್ಣ ಬೆಂಬಲವಿದೆ ಎಂದು ಘೋಷಿಸಿದರು.
ಕರ್ನಾಟಕ ರಾಜ್ಯ ಭಾಷಾ ಅಲ್ಪ ಸಂಖ್ಯಾತರ ಒಕ್ಕೂಟದ ಅಧ್ಯಕ್ಷ ಪ್ರತೀಕ್ ಪೊನ್ನಣ್ಣ ಅತಿಥಿಯಾಗಿ ಮಾತನಾಡಿ, ಸುಳ್ಯದ ಮಣ್ಣಿನಲ್ಲಿ ದೇಶಾಭಿಮಾನದ ಆಳವಾದ ಮಿಳಿತವಿದೆ. ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿರುವ ಕಟ್ಟಡವು ಭಾರತ ದೇಶದ ಸ್ವಾತಂತ್ರ್ಯ ಸಂಗ್ರಾಮದ ಸಾಕ್ಷಿಪ್ರಜ್ಞೆಯಾಗಿದ್ದು ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಿ ಒಂದು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದರು.
ಬೆಳ್ಳಾರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಭಟ್ ಕುರುಂಬುಡೇಲು ಸಂದೇಶ ನೀಡಿ, ಅಮರ ಸುಳ್ಯ ಹೋರಾಟದ ಆರಂಭಿಕ ಸ್ಮಾರಕ ತಾಣವಾದ ಬಂಗ್ಲೆ ಗುಡ್ಡೆ ನಮ್ಮೆಲ್ಲರ ಹೆಮ್ಮೆಯಾಗಿದೆ. ಇದು ಸಾರ್ವಜನಿಕರ ನೆಲೆಯಲ್ಲಿ ಅಭಿವೃದ್ಧಿಗೊಳ್ಳಬೇಕು ಎಂದರು.
ಬೆಳ್ಳಾರೆ ಕೆ.ಪಿ.ಎಸ್.ನ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀನಾಥ್ ರೈ ಬಾಳಿಲ ಮಾತನಾಡಿ, ಶಾಲೆಯ ಕಡೆಯಿಂದ ಎಲ್ಲಾ ಸಹಕಾರ ಮತ್ತು ಭಾಗೀದಾರಿಕೆಗೆ ನಾವು ಸದಾ ಸಿದ್ಧ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಮರ ಸುಳ್ಯ ಹೆರಿಟೇಜ್ ಫೌಂಡೇಶನ್’ ಅಧ್ಯಕ್ಷ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ, ಅನೇಕ ಚಾರಿತ್ರಿಕ ವಾಸ್ತವಗಳು ನಮಗೆ ತಿಳಿದೇ ಇಲ್ಲ ಮತ್ತು ಸುಳ್ಯಕ್ಕೆ, ಬೆಳ್ಳಾರೆಗೆ ಇರುವ ಮಹತ್ತ್ವ ಜಗಜ್ಜಾಹೀರಾಗಬೇಕಿದೆ ಎಂದು ನುಡಿದು ಈ ನಿಟ್ಟಿನಲ್ಲಿ ಅವರ ಫೌಂಡೇಶನ್ ಸದಾ ಶ್ರಮಿಸಲಿದೆ ಎಂದರು.
ಧ್ವಜಾರೋಹಣದ ಸಂದರ್ಭದಲ್ಲಿ ಮತ್ತು ಸಭಾ ಕಾರ್ಯಕ್ರಮದಲ್ಲಿ ಕೆ.ಪಿ.ಎಸ್. ಬೆಳ್ಳಾರೆಯ ವಿದ್ಯಾರ್ಥಿನಿಯರು ಧ್ವಜ ಗೀತೆ, ರಾಷ್ಟ್ರ ಗೀತೆ, ದೇಶಭಕ್ತಿ ಗೀತೆ ಮತ್ತು ಪ್ರಾರ್ಥನೆಗಳನ್ನು ಹಾಡಿದರು. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಹಾಲಿ ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಚಂದ್ರಶೇಖರ ಪನ್ನೆ ಸ್ವಾಗತಿಸಿ, ಅಕ್ಷಯ ಯುವಕ ಮಂಡಲ ನೆಟ್ಟಾರು ಇದರ ಕಾರ್ಯದರ್ಶಿ ಶೈಲೇಶ್ ಎನ್. ವಂದಿಸಿದರು. ಕೆ.ಪಿ.ಎಸ್. ಬೆಳ್ಳಾರೆ ಇಲ್ಲಿನ ಮುಖ್ಯ ಶಿಕ್ಷಕ ಮಾಯಿಲಪ್ಪ ವಿವಿಧ ಕಾರ್ಯಗಳಲ್ಲಿ ಸಹಕರಿಸಿದರು.