ಜನರಿಗೆ ಇನ್ನೊಂದು ಬೆಲೆ ಏರಿಕೆಯ ಬರೆ
ಬೆಂಗಳೂರು: ಹಾಲು ಮತ್ತು ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಜನರಿಗೆ ಇನ್ನೊಂದು ಬೆಲೆ ಏರಿಕೆಯ ಬರೆ ಹಾಕಲು ಸರಕಾರ ಚಿಂತಿಸುತ್ತಿದೆ. ಇಂಧನ ಇಲಾಖೆಯ ಅಡಿಯಲ್ಲಿ ಬರುವ ಡಿಪಾರ್ಟ್‌ಮೆಂಟ್ ಆಫ್ ಇಲೆಕ್ಟ್ರಿಕಕಲ್ ಇನ್‌ಸ್ಪೆಕ್ಟರೇಟ್ ಈಗ ವಾರ್ಷಿಕ ಪರಿಶೀಲನೆ ಮತ್ತು ರಿನೀವಲ್ ಶುಲ್ಕವನ್ನು ದುಪ್ಪಟ್ಟು ಏರಿಕೆ ಮಾಡುತ್ತಿದೆ. ಈ ಹಿಂದೆ ಮೂರು ಮಹಡಿಯ ಮನೆಗೆ ಲಿಫ್ಟ್ ಹಾಕಿಸಿಕೊಂಡಿದ್ದರೆ ಆ ಮನೆಯನ್ನು ಪರಿಶೀಲನೆ ಮಾಡಿ ರಿನೀವಲ್ ಮಾಡಲು 800ರಿಂದ 1000 ರೂ. ಶುಲ್ಕ ತೆಗೆದುಕೊಳುತ್ತಿದ್ದ ಇಲಾಖೆ, ಈಗ ಆ ದರವನ್ನು 5 ಸಾವಿರ ರೂ.ನಿಂದ 8 ಸಾವಿರ ರೂಪಾಯಿಗೆ ಏರಿಕೆ ಮಾಡುತ್ತಿದೆ. ಮನೆ, ಕಚೇರಿ, ಫ್ಯಾಕ್ಟರಿಗೆ 25 ಕೆವಿಎ ಟ್ರಾನ್ಸ್‌ಫಾರ್ಮರ್ ಹಾಕಿಸಿಕೊಂಡಿದ್ದರೆ ಅದನ್ನು ಪರಿಶೀಲನೆ ಮಾಡಲು 1300 ರೂ.ನಿಂದ 1500 ರೂ. ಶುಲ್ಕ ಪಡೆದುಕೊಳ್ಳಲಾಗುತ್ತಿತ್ತು. ಈ ದರವನ್ನು 3 ರಿಂದ 5 ಸಾವಿರ ರೂ.ಗೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿಪಾರ್ಟ್‌ಮೆಂಟ್ ಆಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರೇಟ್ನ ದರ ಏರಿಕೆ ನಿರ್ಧಾರಕ್ಕೆ ಎಫ್ಕೆಸಿಸಿಐ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿಂದೆ 5 ರಿಂದ 10 ಕೆವಿಎ ಸಣ್ಣ ಜನರೇಟರ್ ಪರಿಶೀಲನೆ ಮತ್ತು ರಿನೀವಲ್ಗೆ 2 ಸಾವಿರ ರೂ. ಇದ್ದ ಶುಲ್ಕವನ್ನು ಇದೀಗ 5 ರಿಂದ 8 ಸಾವಿರ ರೂ. ವರೆಗೆ ಏರಿಕೆ ಮಾಡಲಾಗಿದೆ. ಇದು ಕೇವಲ ಆರಂಭಿಕ ಶುಲ್ಕಗಳಷ್ಟೇ. ಮಹಡಿ ಹೆಚ್ಚಾದಂತೆ ಲಿಫ್ಟ್ ಶುಲ್ಕ, ಟ್ರಾನ್ಸ್‌ಫಾರ್ಮರ್ ಮತ್ತು ಜನರೇಟರ್ ಕೆವಿಎ ಹೆಚ್ಚಾದಂತೆ ರಿನೀವಲ್ ಶುಲ್ಕ ಹೆಚ್ಚಾಗುತ್ತಲೇ ಹೋಗುತ್ತದೆ. ಇದರಿಂದ ಹೊಸದಾಗಿ ಮನೆ, ಅಪಾರ್ಟ್ಮೆಂಟ್, ಫ್ಯಾಕ್ಟರಿ ಕಟ್ಟುವವರಿಗೆ ಮತ್ತು ಈಗಾಗಲೇ ನಿರ್ಮಾಣವಾಗಿರುವ ಅಪಾರ್ಟ್ಮೆಂಟ್, ಫ್ಯಾಕ್ಟರಿ, ಮನೆ ಮಾಲೀಕರಿಗೂ ಹೆಚ್ಚಿನ ಹೊರೆ ಆಗಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮನೆ ಮಾಲೀಕರು, ಸರ್ಕಾರ ಗ್ಯಾರಂಟಿಗೆ ಹಣ ಹೊಂದಿಸಲು ಈ ರೀತಿ ದರ ಏರಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.