ಪೊಲೀಸರ ತನಿಖೆಯಿಂದ ಬಯಲಾಯಿತು ಅಸಲಿ ವಿಷಯ
ಮಂಗಳೂರು: ಉಳ್ಳಾಲದ ಮನೆಯ ಆವರಣವೊಂದರಲ್ಲಿ ಲಕೋಟೆಯಲ್ಲಿ ರಕ್ಷಿಸಿಟ್ಟ ಮಾನವ ಅಸ್ಥಿಗಳು ಪತ್ತೆಯಾಗಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಪೊಲೀಸರ ತನಿಖೆ ಬಳಿಕ ಇದು ಯಾವುದೇ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಅಸ್ಥಿ ಅಲ್ಲ ಎಂದು ತಿಳಿದುಬಂದಿದೆ.
ಕುಂಪಲದ ಚಿತ್ರಾಂಜಲಿ ನಗರದ ಮನೆಯೊಂದರ ಆವರಣದಲ್ಲಿ ಶನಿವಾರ ರಾತ್ರಿ ಸಂಸ್ಕರಿಸಿಟ್ಟ ಮಾನವ ಅಸ್ಥಿಗಳು ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಅಸ್ಥಿಗಳ ಹಿಂದಿನ ಅಸಲಿಯತ್ತನ್ನು ಪತ್ತೆ ಹಚ್ಚಿದ್ದಾರೆ.
ಶನಿವಾರ ನಡುರಾತ್ರಿ ಚಿತ್ರಾಂಜಲಿ ನಗರದ ಮನೆಯ ಆವರಣದ ಬಳಿ ಪ್ರಯೋಗಾಲಯದ ಮಾದರಿಯ ಅಸ್ಥಿ ಲಕೋಟೆಯಲ್ಲಿ ಸಂಸ್ಕರಿಸಿದ ರೀತಿಯಲ್ಲಿ ಪತ್ತೆಯಾಗಿದೆ. ಈ ಸುದ್ದಿ ತಿಳಿದ ಜನರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು. ಪೊಲೀಸರು ಅಸ್ಥಿಗಳು ತುಂಬಿದ್ದ ಲಕೋಟೆಯನ್ನು ವಶಕ್ಕೆ ಪಡೆದಿದ್ದಾರೆ. ಅಸ್ಥಿಗಳಿದ್ದ ಲಕೋಟೆಯನ್ನು ಸ್ಥಳೀಯ ಮಹಿಳೆಯೇ ತನ್ನ ಮನೆಯ ಆವರಣದ ಬಳಿ ಎಸೆದಿರುವ ವಿಚಾರ ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
ಈ ಮಹಿಳೆ ಮಂಗಳೂರಿನ ವೈದ್ಯರೋರ್ವರ ಮನೆಯಲ್ಲಿ ಕೆಲಸಕ್ಕಿದ್ದರು. ನಿವೃತ್ತಿ ಬಳಿಕ ಆ ವೈದ್ಯರು ಮನೆ ಬಿಟ್ಟು ಹೋದಾಗ ಮನೆಯಲ್ಲಿದ್ದ ಕೆಲ ವಸ್ತುಗಳನ್ನು ಮಹಿಳೆ ತಂದಿದ್ದರು. ವೈದ್ಯರ ಮನೆಯಿಂದ ತಂದ ವಸ್ತುಗಳಲ್ಲಿ ಸಂಸ್ಕರಿಸಿಡಲಾದ ಅಸ್ಥಿಗಳ ಲಕೋಟೆ ಕೂಡ ಇತ್ತು. ಇದು ಕೆಲಸಕ್ಕೆ ಬಾರದ ವಸ್ತು ಎಂದು ತಿಳಿದು ಮಹಿಳೆ ಎಸೆದಿದ್ದರು. ಕಳೆದ ವಾರ ಚಿತ್ರಾಂಜಲಿ ನಗರದಲ್ಲಿ ನಡೆದ ಸ್ಥಳೀಯ ಸಂಘಟನೆಯೊಂದರ ವಾರ್ಷಿಕೋತ್ಸವದಲ್ಲಿ ನೃತ್ಯ ಪ್ರದರ್ಶನ ನೀಡಿದ್ದ ಯುವಕನೋರ್ವನ ಬಾಡಿಗೆ ಕಾಸ್ಟ್ಯೂಮ್ ಕಳೆದು ಹೋಗಿತ್ತು. ನಿನ್ನೆ ರಾತ್ರಿ ಯುವಕ ಕಾಸ್ಟ್ಯೂಮ್ ಹುಡುಕಲು ಬಂದಾಗ ಅಸ್ಥಿಗಳ ಲಕೋಟೆ ದೊರೆತು ತುಸು ಹೊತ್ತು ಕುತೂಹಲಕಾರಿ ಪರಿಸ್ಥಿತಿ ನೆಲೆಸಿತ್ತು.