ಹಬ್ಬಗಳಲ್ಲಿ ಮೊದಲ ಹಬ್ಬ ಯುಗಾದಿ. ನಮ್ಮ ಹಿಂದೂ ಧರ್ಮದ ಪ್ರಕಾರ ವರುಷದ ಪ್ರಥಮ ದಿನವನ್ನು “ಯುಗಾದಿ” ಎಂದು ಕರೆಯಲಾಗುತ್ತದೆ.
ಸೂರ್ಯನ ಸುಡು ಬಿಸಿಲಿಗೆ ಬೆಂದು ಒಣಗಿ ತನ್ನೆಲ್ಲಾ ಪತ್ರೆಗಳನ್ನು ಕಳಕೊಂಡ ವೃಕ್ಷ ಮತ್ತೆ ಚಿಗುರೆಲೆಯ ಸೃಷ್ಟಿಸಿ ಮೃಗ-ಖಗಗಳಿಗೆ ಅಸನ-ವಸನ, ಹಸಿರು ಋಣ ನೀಡಿ ಸುಂದರ, ಸಂಭ್ರಮದ ಬದುಕಿಗೆ ಮುನ್ನುಡಿ ಬರೆಯಲು ಸ್ವಾಗತಿಸುವ ಸುಮುಹೂರ್ತವೇ “ಯುಗಾದಿ”.
ವರುಷಕ್ಕೊಮ್ಮೆ ವಸಂತ ಋತುವಿನ ಆಗಮನ ಚರಾಚರಗಳಲ್ಲಿನ ಎಳೆತನವನ್ನು ದಾಟಿಸಿ ಯವ್ವನಕ್ಕೆ ಪಲ್ಲವಿ ಬರೆದು ಶೃಂಗಾರದ ಚಿತ್ತಾರ ಬಿಡಿಸುವ ರಮಣೀಯ ಸಮಯವೇ “ಯುಗಾದಿ”. ಇನ್ನು ಪುರಾಣಗಳ ಪ್ರಕಾರ ಸೋಮಕಾಸುರನೆಂಬ ರಕ್ಕಸನು ಬ್ರಹ್ಮನಿಂದ ನಾಲ್ಕು ವೇದಗಳನ್ನು ಕದಿಯಲಾಗಿ, ಜಲವಾಸಿಯಾಗಿ ಅವಿತಿದ್ದನು. ಆ ಸಂದರ್ಭದಲ್ಲಿ ವಿಷ್ಣುವು ಮತ್ಸ್ಯಾವತಾರಿಯಾಗಿ ಸೋಮಕಾಸುರನನ್ನು ವಧಿಸಿ ಆತನಲ್ಲಿದ್ದ ವೇದಗಳನ್ನು ಬ್ರಹ್ಮನಿಗೊಪ್ಪಿಸಿದ ಪುಣ್ಯ ದಿನ ವನ್ನು “ಯುಗಾದಿ” ಎಂದು ಆಚರಿಸಲಾಯಿತು ಎಂಬ ಪ್ರತೀತಿಯಿದೆ.
ವೇದಗಳನ್ನು ಮರುಪಡೆದ ಬ್ರಹ್ಮದೇವನು ಸೂರ್ಯೋದಯದ ಕಾಲದಲ್ಲಿ ಚೈತ್ರ ಶುಕ್ಲಪ್ರತಿಪಾದೆಯಂದು ಇಡೀ ಜಗತ್ತನ್ನೇ ಉಂಟುಮಾಡಿದನು. ಮಾತ್ರವಲ್ಲ ಅದೇ ಶುಭದಿನದಂದು ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ನಿರ್ಮಿಸಿ ಕಾಲವನ್ನು ನಿಗದಿಪಡಿಸಿದ ನಂತರ ಜೀವರಾಶಿ, ಜಲರಾಶಿ, ಬೆಟ್ಟ-ಗುಡ್ಡಗಳ ಸೃಷ್ಟಿಯಾದ ಈ ಎಲ್ಲಾ ಮೊದಲುಗಳಿಗೆ ಯುಗಾದಿ ಎಂದು ಕರೆಯಲಾಯಿತೆನ್ನುವ ಉಲ್ಲೇಖವಿದೆ.
ಆದರೆ ಯುಗಾದಿ ಎಂದಾಕ್ಷಣ ನಾವು ಬೇವು ಬೆಲ್ಲ ಹಂಚಿಕೊಂಡು ಸಂಭ್ರಮಿಸುತ್ತೇವೆ. ಒಂದೆಡೆ ಬೇವು ಬೆಲ್ಲವು ಕಷ್ಟ ಸುಖಗಳ ಸಂಕೇತವಾದರೆ ವೈಜ್ಞಾನಿಕವಾಗಿ ದೇಹದಲ್ಲಿ ಬೇವು ಬೆಲ್ಲವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ವೃದ್ಧಿಸುತ್ತದೆ.
ಈ ಯುಗಾದಿ ಎಲ್ಲರ ಬಾಳಿಗೆ ಒಳಿತನ್ನು ತರಲೆಂದು ಹಾರೈಸೋಣ..
“ಸರ್ವೇ ಜನ ಸುಖಿನೋಭವಂತು”
Dr. Sharmila Nataraj
Sir. Asst. Librarian
Knowledge Management Centre
Indus Business Academy
Bangalore