ಪುತ್ತೂರು: ಸಂತ ಫಿಲೋಮಿನಾ ಕಾಲೇಜು ಸ್ವಾಯತ್ತತೆಯನ್ನು ಪಡೆದ ಬಳಿಕ ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ದ್ವಿತೀಯ ಆಂತರಿಕ ಪರೀಕ್ಷೆಗಳನ್ನು ಆನ್‌ಲೈನ್ ಮೂಲಕ ನಡೆಸಲಾಯಿತು.
ಪರೀಕ್ಷಾ ಪ್ರಕ್ರಿಯೆಯ ಗೌಪ್ಯತೆ ಹಾಗೂ ಸಮಗ್ರತೆಗಳನ್ನು ಕಾಪಾಡಿಕೊಳ್ಳಲು ಆನ್‌ಲೈನ್ ಪರೀಕ್ಷೆಗಳಿಗೆ ಕಾಲೇಜು ಬಳಸುವ ಸಾಫ್ಟ್‌ವೇರ್ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ಯಾವುದೇ ಇತರ ವೆಬ್‌ಸೈಟ್‌ಗಳನ್ನು ಪ್ರವೇಶಿಸುವುದನ್ನು ಅಥವಾ ಯಾವುದೇ ರೀತಿಯ ಅವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿರ್ಬಂಧಿಸುವ ಮೂಲಕ ಸುರಕ್ಷಿತ ಪರೀಕ್ಷಾ ವಾತಾವರಣವನ್ನು ಖಾತ್ರಿಗೊಳಿಸುತ್ತದೆ. ವಿದ್ಯಾರ್ಥಿಳು ಪರೀಕ್ಷೆಯ ಸಂದರ್ಭದಲ್ಲಿ ತಮ್ಮ ಕಂಪ್ಯೂಟರ್‌ನ ವೆಬ್ ಕ್ಯಾಮರಾವನ್ನು ಚಾಲ್ತಿಯಲ್ಲಿರಿಬೇಕಾಗಿದ್ದು ಚಲನವಲನಗಳು ಮತ್ತು ಸಂವಹನಗಳನ್ನು ಮೇಲ್ವಿಚಾರಣೆ ಮಾಡಲಾಯಿತು. ಪರೀಕ್ಷೆಯ ಉತ್ತರಗಳನ್ನು ಸಲ್ಲಿಸಿದ ತಕ್ಷಣವೇ ಮೌಲ್ಯಮಾಪನವನ್ನು ಮಾಡಿ ವಿದ್ಯಾರ್ಥಿಗಳಿಗೆ ಫಲಿತಾಂಶವನ್ನು ಪ್ರಕಟಿಸಲಾಯಿತು.
“ಸ್ವಾಯತ್ತತೆಯನ್ನು ಪಡೆದ ಬಳಿಕ ಕಾಲೇಜನಲ್ಲಿ ಹಲವು ನೂತನ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕಾಲೇಜು ಈಗಾಗಲೇ ಬೋಧನೆ ಹಾಗೂ ಅದಕ್ಕೆ ಸಂಬಂಧಿಸಿದ ಇತರ ವಿಷಯಗಳಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಆನ್‌ಲೈನ್ ಪರೀಕ್ಷೆಗಳನ್ನು ನಡೆಸುವುದರ ಮೂಲಕ ಕಾಲೇಜು ಆಧುನಿಕ ಶೈಲಿಯ ಮೌಲ್ಯಮಾಪನವನ್ನು ಅಳವಡಿಸಿಕೊಳ್ಳುತ್ತಿದೆ. ಇದು ಕಾಲೇಜಿನ ನಾವೀನ್ಯತೆಯನ್ನು ಪೋಷಿಸುವ ದೃಷ್ಠಿಕೋನಕ್ಕೆ ಸಾಕ್ಷಿಯಾಗಿದೆ. ಇಂದು ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರೀಕ್ಷೆಗಳನ್ನು ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಸ್ವಾಯತ್ತ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ ದ್ವಿತೀಯ ಆಂತರಿಕ ಮೌಲ್ಯಮಾಪನ ಪರೀಕ್ಷೆಗಳನ್ನು ಆನ್‌ಲೈನ್ ಮುಖಾಂತರ ನಡೆಸಲಾಗುವುದು ಎಂದು ಕಾಲೇಜಿನ ಪ್ರಾಂಶುಪಾಲ ರೆ.ಫಾ.ಆ್ಯಂಟನಿ ಪ್ರಕಾಶ್ ಮೊಂತೆರೋ ತಿಳಿಸಿದ್ದಾರೆ.