1,600ಕ್ಕೂ ಹೆಚ್ಚು ಮಂದಿ ಬಲಿ, 3,400 ಮಂದಿಗೆ ಗಾಯ
ನೇಪಿಟಾವ್: ಮ್ಯಾನ್ಮಾರ್ ಮತ್ತು ನೆರೆಯ ಥೈಲ್ಯಾಂಡ್‌ನಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಸಾವಿನ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಎರಡು ದಿನ ಕಳೆದರೂ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಲವು ಮಂದಿ ಅವಶೇಷಗಳ ಅಡಿಯಿಂದ ಪವಾಡಸದೃಶವಾಗಿ ಬದುಕುಳಿದು ಹೊರಬಂದಿದ್ದಾರೆ. ಶುಕ್ರವಾರ ಬೆಳಗ್ಗೆ 11.50ರ ವೇಳೆಗೆ ಸಂಭವಿಸಿದ ಭೂಕಂಪ ಶನಿವಾರದ ಹೊತ್ತಿಗೆ ಸುಮಾರು 1600ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. 3,400 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಶುಕ್ರವಾರ ಮ್ಯಾನ್ಮಾರ್‌ನಲ್ಲಿ ಮೊದಲು 7.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಸಾಗಯಿಂಗ್‌ನ ವಾಯುವ್ಯಕ್ಕೆ ಭೂಮಿಯಿಂದ 10 ಕಿಮೀ ಆಳದಲ್ಲೇ ಕೇಂದ್ರ ಬಿಂದು ಪತ್ತೆಯಾಗಿತ್ತು. ಇದಾದ ಕೆಲವು ಗಂಟೆಗಳಲ್ಲಿ ಇನ್ನೂ ಮೂರ್ನಾಲ್ಕು ಭಾರಿ ಭೂಕಂಪ ಸಂಭವಿಸಿತ್ತು. ಸರಣಿ ಭೂಕಂಪದ ಹಿನ್ನೆಲೆ ಗಗನ ಚುಂಬಿ ಕಟ್ಟಡಗಳು ನೆಲಕ್ಕುರುಳಿವೆ. ಇದರಿಂದ ಭಾರತದ ಕೆಲ ಪ್ರದೇಶಗಳಲ್ಲೂ ಭೂಮಿ ಕಂಪಿಸಿದ ಅನುಭವವಾಗಿತ್ತು. ಸುಮಾರು 354 ಅಟಂಬಾಂಬ್‌ಗಳು ಏಕಕಾಲದಲ್ಲಿ ಸ್ಫೋಟಿಸಿದಾಗ ಬಿಡುಗಡೆಯಾಗುಷ್ಟು ಶಕ್ತಿ ಈ ಭೂಕಂಪದಲ್ಲಿ ಬಿಡುಗಡೆಯಾಗಿದೆ ಎಂದು ವಿಜ್ಞಾನಿಗಳು ಭೂಕಂಪದ ತೀವ್ರತೆಯನ್ನು ಬಣ್ಣಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಿಂದಾಗಿ ತುರ್ತುಸೇವೆಗಳು ದುರ್ಬಲವಾಗಿವೆ. ಅಲ್ಲಿನ ಸರ್ಕಾರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಸಮರ್ಥವಾಗಿದೆ ಎಂದು ಹೇಳಲಾಗಿದೆ. ಸದ್ಯ ಮ್ಯಾನ್ಮಾರ್ ಒಂದರಲ್ಲೇ 1,640 ಮಂದಿ ಸಾವನ್ನಪ್ಪಿದ್ದು, ಬ್ಯಾಂಕಾಂಕ್‌ನಲ್ಲಿ ಈವರೆಗೆ 10 ರಿಂದ 20 ಮಂದಿ ಸಾವನ್ನಪ್ಪಿದ್ದಾರೆ. ಕುಸಿದ ಕಟ್ಟಡಗಳ ಅವಶೇಷಗಳ ಅಡಿ ನೂರಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಸಾಗಯಿಂಗ್‌ನಿಂದ ಐರಾವಡ್ಡಿ ನದಿವರೆಗೆ ವ್ಯಾಪಿಸಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಆವಾ ಸೇತುವೆಯು ಕುಸಿದಿದೆ. ಇದರಿಂದ ಸಂಪರ್ಕ ಕಡಿತಗೊಂಡ ಪರಿಹಾರ ಸಾಮಗ್ರಿ ತಲುಪಿಸುವುದು ಕಷ್ಟವಾಗಿದೆ.
ಭೂಕಂಪದಿಂದ ಅತಿಹೆಚ್ಚು ಹಾನಿ ಮತ್ತು ಸಾವುನೋವು ಸಂಭವಿಸಿರುವುದು ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಲ್ಲಿ. ಶನಿವಾರ ರಾತ್ರಿಗಾಗುವಾಗ 1,644 ಶವಗಳನ್ನು ಹೊರತೆಗೆಯಲಾಗಿದೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಿದೆ. ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳು ಮ್ಯಾನ್ಮಾರ್ ನೆರವಿಗೆ ಧಾವಿಸಿವೆ.