ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಜಾಲತಾಣ ಅನಾವರಣ, ಜೇನುಪೆಟ್ಟಿಗೆ ನಿರ್ವಹಣಾ ಸೇವೆ ಲೋಕಾರ್ಪಣೆ, ಜೇನು ಕೃಷಿಕರ ಸಮ್ಮಿಲನ

ಪುತ್ತೂರು: ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನೂತನ ಜಾಲತಾಣದ ಅನಾವರಣ, ಕೃಷಿಕಾರಿಗಾಗಿ ಜೇನು ಪೆಟ್ಟಿಗೆ ನಿರ್ವಹಣಾ ಸೇವೆಯ ಲೋಕಾರ್ಪಣೆ ಮತ್ತು ಜೇನು ಕೃಷಿಕರ ಸಮ್ಮಿಲನ ಕಾರ್ಯಕ್ರಮ ಪುತ್ತೂರಿನ ಜಿ. ಎಲ್. ರೋಟರಿ ಸಭಾಭವನದಲ್ಲಿ ನಡೆಯಿತು.

ಪುತ್ತೂರು ಶಾಸಕ ಅಶೋಕ ಕುಮಾರ ರೈ ಜೇನು ಕೃಷಿಯ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಜೇನಿನ ಬಳಕೆ ವ್ಯಾಪಕವಾಗಿ ಹೆಚ್ಚಾಗುವಂತೆ ಸರಕಾರದ ಮಟ್ಟದಲ್ಲಿ ಹೆಚ್ಚಿನ ವ್ಯವಸ್ಥೆಯನ್ನು ಜಾರಿಗೊಳಿಸಿ, ಜೇನು ಕೃಷಿಕರಿಗೆ ಉತ್ತಮ ಮಾರುಕಟ್ಟೆ ಲಭಿಸುವಂತೆ ರೈತ ಉತ್ಪಾದಕ ಸಂಸ್ಥೆಯ ಮೂಲಕ ಆಗಲಿ ಎಂದು ಆಶಿಸಿದರು.

ಜೇನು ಕೃಷಿಗೆ ಮಾನ ತಂದುಕೊಡುವ ನಿಟ್ಟಿನಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪೆನಿಯ ಪ್ರಯತ್ನವನ್ನು ಶ್ಲಾಘಿಸಿದ ಶಾಸಕರು ಈ ಬಗ್ಗೆ ಸರಕಾರದ ಮಟ್ಟದಲ್ಲಿ ಯಾವುದೇ ಸಹಾಯ ಸಹಕಾರದ ಅಗತ್ಯವಿದ್ದಲ್ಲಿ ಮಾಡುವುದಾಗಿ ಭರವಸೆ ನೀಡಿದರು.

































 
 

ದಕ್ಷಿಣ ಕನ್ನಡ ಜಿಲ್ಲಾ ತೋಟಗಾರಿಕೆ ಉಪ ನಿರ್ದೇಶಕ ಮಂಜುನಾಥ್ ಡಿ. ಮಾತನಾಡಿ, ಜೇನು ಕೃಷಿಗೆ ಸಂಬಂಧಿಸಿದಂತೆ ಸರಕಾರದಿಂದ ಇರುವ ಸವಲತ್ತುಗಳು, ಜೇನು ಕೃಷಿಯ ರೈತ ಉತ್ಪಾದಕ ಸಂಸ್ಥೆಯ ಮೂಲಕ ದೊರೆಯಬಹುದಾದ ಸೇವೆಗಳು ಮತ್ತು ಕರ್ನಾಟಕ ಸರಕಾರದ ಜೇನಿನ ಝೇಂಕಾರ ಬ್ರಾಂಡ್ ಬಗ್ಗೆ ಕೂಡ ತಿಳಿಸಿದರು. ಗ್ರಾಮಜನ್ಯದ ಅಧ್ಯಕ್ಷರಾದ ಶ್ರೀ ಮೂಲಚಂದ್ರ ಅವರು ಜೇನು ಕೃಷಿಯ ಮಹತ್ವ ಮತ್ತು ತಮ್ಮ ಸಂಸ್ಥೆಯ ಬದ್ಧತೆಯ ಬಗ್ಗೆ ತಿಳಿಸಿದರು.

ಕೃಷಿಕರ ಸಮ್ಮುಖದಲ್ಲಿ ಜೇನು ಕೃಷಿಯನ್ನು ಬೆಳೆ ವಿಮೆಯ ವ್ಯಾಪ್ತಿಗೆ ಬರುವಂತೆ ಸಂಘಟಿತವಾಗಿ ಪ್ರಯತ್ನ ಮಾಡುವ ಮೂಲಕ ಸರಕಾರದ ಮಟ್ಟದಲ್ಲಿ ಜೇನು ಕೃಷಿಕರು ಗಮನ ಸೆಳೆಯುವಂತೆ ಮುಂದಿನ ದಿನಗಳಲ್ಲಿ ಆಂದೋಲನ ಮಾಡಬೇಕೆನ್ನುವ ನಿರ್ಧಾರ ಮಾಡಲಾಗಿ ಉಪನಿರ್ದೇಶಕರು ಈ ನಿಟ್ಟಿನಲ್ಲಿ ಸಹಕರಿಸುವುದಾಗಿ ತಿಳಿಸಿದರು. ಈ ಬಗ್ಗೆ ರಾಷ್ಟ್ರೀಯ ತೋಟಗಾರಿಕಾ ಇಲಾಖೆಯ ಮುಖ್ಯಸ್ಥರಾದ ಡಾ. ಪ್ರಭಾತ್ ಕುಮಾರ್ ಅವರಲ್ಲಿ ಈ ಹಿಂದೆ ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರು ವಿಚಾರ ವಿಮರ್ಶೆ ನಡೆಸಿದ್ದು ಅವರು ಸಂಸ್ಥೆಯು ಜೇನು ಕೃಷಿಕರೊಂದಿಗೆ ಸಂವಾದ ನಡೆಸಿ ಈ ಬಗ್ಗೆ ಮನವಿ ಸಲ್ಲಿಸುವಂತೆ ಸೂಚಿಸಿದ್ದರು.

ವಕೀಲರಾದ ಮಹೇಶ್ ಕಜೆ, ತಾಲ್ಲೂಕು ತೋಟಗಾರಿಕಾ ಉಪ ನಿರ್ದೇಶಕರು ಸೇರಿ ಹಲವಾರು ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಜೇನು ಕೃಷಿಕರನ್ನು ಗೌರವಿಸಲಾಯಿತು. ಸಿಬ್ಬಂದಿ ವಾಣಿಶ್ರೀ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್‍ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಧನ್ಯ ವಂದಿಸಿದರು. ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಸದಸ್ಯರು, ಸಿಬ್ಬಂದಿಗಳು ಮತ್ತು ನಿರ್ದೇಶಕರು ಸಕ್ರಿಯವಾಗಿ ಭಾಗವಹಿಸಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top