ರಾಯ್‌ಪುರ: ಛತ್ತೀಸ್‌ಗಢದ ಸುಕ್ಮಾ ಮತ್ತು ದಾಂತೆವಾಡ ಜಿಲ್ಲೆಗಳ ಗಡಿಭಾಗದಲ್ಲಿರುವ ಗೋಮಗುಂಡ ದಟ್ಟಾರಣ್ಯದಲ್ಲಿ ಇಂದು ಮತ್ತೆ 16 ನಕ್ಸಲರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ನಸುಕಿನ ವೇಳೆಗೆ ಪೊಲೀಸರು ಮತ್ತು ನಕ್ಸಲರ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ.
ನಿನ್ನೆಯಿಂದೀಚೆಗೆ ಇಲ್ಲಿ ನಕ್ಸಲ್ ನಿಗ್ರಹ ಪಡೆಯ ಪೊಲೀಸರು ಭದ್ರತಾ ಪಡೆಯ ಸಹಕಾರದೊಂದಿಗೆ ಕೂಂಬಿಂಗ್ ನಡೆಸುತ್ತಿದ್ದರು. ಇಂದು ನಸುಕಿನ ಹೊತ್ತು ಪೊಲೀಸರಿಗೆ ನಕ್ಸಲರು ಎದುರಾಗಿದ್ದು, ಗುಂಡಿನ ಕಾಳಗದಲ್ಲಿ 16 ನಕ್ಸಲರು ಸತ್ತಿರುವುದು ದೃಢಪಟ್ಟಿದೆ. ಇನ್ನೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನಕ್ಸಲರ ಬಳಿ ಅತ್ಯಾಧುನಿ ಬಂದೂಕುಗಳು, ಮದ್ದುಗುಂಡುಗಳು ಮತ್ತಿತರರ ಉಪಕರಣಗಳು ಇದ್ದವು. ನಕ್ಸಲರ ದೊಡ್ಡ ತಂಡವೇ ಪೊಲೀಸರಿಗೆ ಎದುರಾಗಿತ್ತು ಎಂದು ಛತ್ತೀಸ್‌ಗಢದ ಗೃಹ ಸಚಿವ ವಿಜಯ್ ಶರ್ಮ ತಿಳಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದೀಚೆಗೆ ನಕ್ಸಲರಿಗೆ ಭದ್ರತಾ ಪಡೆ ಭಾರಿ ಹೊಡೆತವನ್ನು ನೀಡುತ್ತಿದೆ. 2026ರ ಮಾ.31ರೊಳಗೆ ದೇಶವನ್ನು ನಕ್ಸಲ್ ಮುಕ್ತ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಘೋಷಿಸಿದ್ದಾರೆ. ಛತ್ತೀಸ್‌ಗಢವೊಂದರಲ್ಲೇ ಈ ವರ್ಷ ಇಷ್ಟರ ತನಕ 132 ನಕ್ಸಲರನ್ನು ಸಾಯಿಸಲಾಗಿದೆ. ನಕ್ಸಲರ ಕೇಂದ್ರ ಸ್ಥಾನವಾಗಿರುವ ಬಸ್ತಾರ್‌ನ ದಟ್ಟಾರಣ್ಯದಲ್ಲೇ 100ಕ್ಕೂ ಅಧಿಕ ನಕ್ಸಲರು ಭದ್ರತಾ ಪಡೆ ಗುಂಡಿಗೆ ಬಲಿಯಾಗಿದ್ದಾರೆ.