10 ಸಾವಿರ ಜನ ಬಲಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಅಮೆರಿಕ
ಮ್ಯಾನ್ಮಾರ್ : ನಿನ್ನೆ ಭೀಕರ ಭೂಕಂಪ ಸಂಭವಿಸಿ ಅಪಾರ ಪ್ರಮಾಣದಲ್ಲಿ ನಾಶನಷ್ಟ ಉಂಟಾಗಿದ್ದ ಮ್ಯಾನ್ಮಾರ್‌ನಲ್ಲಿ ತಡರಾತ್ರಿ ಮತ್ತೊಮ್ಮೆ ಭೂಮಿ ಕಂಪಿಸಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದರೊಂದಿಗೆ ಶುಕ್ರವಾರ ಒಂದೇ ದಿನ ಮೂರು ಬಾರಿ ಭೂಕಂಪ ಸಂಭವಿಸಿದಂತಾಗಿದೆ. ಭೂಕಂಪನದ ತೀವ್ರತೆ 900 ಕಿ.ಮೀ. ದೂರವಿರುವ ಥ್ಯಾಯ್ಲೆಂಡ್‌ನ ಬ್ಯಾಂಕಾಂಕ್ ಮತ್ತು ಬಾಂಗ್ಲಾದೇಶದವರೆಗೂ ವ್ಯಾಪಿಸಿದೆ. ಭೂಕಂಪನದ ಕೇಂದ್ರ ಬಿಂದು ಇದ್ದ ಮ್ಯಾನ್ಮಾರ್‌ನಲ್ಲಿ ಭಾರಿ ಹಾನಿಯಾಗಿದ್ದು, ಈವರೆಗೆ 700ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಅಮೆರಿಕದ ರಕ್ಷಣಾ ಪಡೆಗಳು ಸಾವಿನ ಸಂಖ್ಯೆ 10,000 ದಾಟುವ ಸಾಧ್ಯತೆ ಇದೆ ಎಂದು ಎಚ್ಚರಿಸಿವೆ.
ಶುಕ್ರವಾರ ತಡರಾತ್ರಿ 11.56ರ ವೇಳೆ ಮ್ಯಾನ್ಮಾರ್‌ನಲ್ಲಿ ಮತ್ತೊಮ್ಮೆ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ.
ಮ್ಯಾನ್ಮಾರ್, ಥಾಯ್ಲೆಂಡ್‌ನಲ್ಲಿ ಭೂಕಂಪವಾದ ಬೆನ್ನಲ್ಲೇ ಶನಿವಾರ ಮುಂಜಾನೆ ಅಫ್ಘಾನಿಸ್ಥಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಇಂದು ಮುಂಜಾನೆ 5.16ಕ್ಕೆ ಭೂಮಿ ಕಂಪಿಸಿದ್ದು, ಭೂಮಿಯಿಂದ 180 ಕಿಮೀ ಆಳದಲ್ಲಿ ಕೇಂದ್ರ ಬಿಂದು ಪತ್ತೆಯಾಗಿದ್ದೆ. ರಿಕ್ಟರ್ ಮಾಪಕದಲ್ಲಿ 4.7 ತೀವ್ರತೆ ದಾಖಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಫ್ಘಾನಿಸ್ಥಾನದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.
ಮ್ಯಾನ್ಮಾರ್‌ನಲ್ಲಿ ಉಂಟಾದ ಭೀಕರ ಭೂಕಂಪ ಸಾಕಷ್ಟು ಸಾವುನೋವು ಉಂಟುಮಾಡಿದೆ. ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಈವರೆಗೆ 700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇನ್ನೂ ನೂರಾರು ಮಂದಿ ಅವಶೇಷಗಳ ಅಡಿ ಸಿಲುಕಿರುವ ಶಂಕೆಯಿದೆ. ಸಾವಿರಾರು ಹಾಸಿಗೆ ಸೌಲಭ್ಯ ಹೊಂದಿರುವ ಆಸ್ಪತ್ರೆಗಳು ನಾಮಾವಶೇಷವಾಗಿದ್ದು, ಗಾಯಗೊಂಡವರಿಗೆ ರಸ್ತೆಯಲ್ಲೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಉಂಟಾಗಿದೆ. ಇದರಿಂದ ಮ್ಯಾನ್ಮಾರ್‌ನ ನೈಪಿತಾವು ಸೇರಿ 6 ಪ್ರದೇಶ ಹಾಗೂ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.
ಭಾರತದಿಂದ ನೆರವು ರವಾನೆ
ನೆರೆ ರಾಷ್ಟ್ರದ ಸಂಕಷ್ಟಕ್ಕೆ ಭಾರತ ತಕ್ಷಣ ಸ್ಪಂದಿಸಿದ್ದು, ಸಾಕಷ್ಟು ನೆರವು ರವಾನಿಸಿದೆ. ಮ್ಯಾನ್ಮಾರ್‌ನ ಅಪಾರ ಸಾವುನೋವಿಗೆ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ ನೆರವಿಗೆ ನಿಲ್ಲಲಿದೆ ಎಂದು ಹೇಳಿದ್ದಾರೆ. ಮ್ಯಾನ್ಮಾರ್‌ಗೆ ನೆರವಾಗಲು ಆಪರೇಷನ್ ಬ್ರಹ್ಮ ಕಾರ್ಯಾಚರಣೆ ಶುರುಮಾಡಲಾಗಿದ್ದು, ಮೊದಲ ಕಂತಿನಲ್ಲಿ 15 ಟನ್ ರಕ್ಷಣಾ ಸಾಮಗ್ರಿಗಳನ್ನು ವಾಯುಪಡೆ ವಿಮಾನದಲ್ಲಿ ರವಾನಿಸಿದೆ. ಇದರಲ್ಲಿ ಔಷಧ, ಆಹಾರ ಕಿಟ್, ಅಡುಗೆ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳಿವೆ.