900 ಕಿ.ಮೀ. ದೂರದಲ್ಲಿರುವ ಕಟ್ಟಡ ಕುಸಿತ
ಮ್ಯಾನ್ಮಾರ್ : ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ನಂತರ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ಮುಖ್ಯಸ್ಥರು 144 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 730 ಜನರು ಗಾಯಗೊಂಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. ತೀವ್ರ ಹಾನಿಗೊಳಗಾದ 2 ನಗರಗಳ ಫೋಟೊಗಳು ಮತ್ತು ವೀಡಿಯೊಗಳು ವ್ಯಾಪಕ ಹಾನಿಯನ್ನು ತೋರಿಸಿವೆ. ನೆರೆಯ ಥೈಲ್ಯಾಂಡ್‌ನಲ್ಲೂ ಭೂಕಂಪನದ ಅನುಭವವಾಗಿದ್ದು, ಥೈಲ್ಯಾಂಡ್ ರಾಜಧಾನಿಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ ನಿರ್ಮಾಣ ಹಂತದಲ್ಲಿದ್ದ ಎತ್ತರದ ಕಟ್ಟಡವೊಂದು ಕುಸಿದಿದೆ. ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆ ಬಳಿ ಭೂಕಂಪದ ಕೇಂದ್ರಬಿಂದುವಿದ್ದು, 7.7 ತೀವ್ರತೆಯ ಭೂಕಂಪ ಸಂಭವಿಸಿದೆ. ನಂತರ 6.4 ತೀವ್ರತೆಯ ಪ್ರಬಲವಾದ ಇನ್ನೊಂದು ಭೂಕಂಪ ಸಂಭವಿಸಿದೆ.

ಭೂಕಂಪದ ತೀವ್ರತೆ ಮತ್ತು ಹಾನಿಯನ್ನು ಗಮನಿಸಿದ ಅಮೆರಿಕದ ತಜ್ಞರು ಸಾವಿನ ಸಂಖ್ಯೆ ಸಾವಿರಗಳಲ್ಲಿರಬಹುದು ಎಂದು ಎಚ್ಚರಿಸಿದೆ. ಮಂಡಲೆಯಲ್ಲಿನ ಬಂಡೆಗಳು ಮತ್ತು ಬಿರುಕು ಬಿಟ್ಟ ರಸ್ತೆಗಳು, ಹಾನಿಗೊಳಗಾದ ಹೆದ್ದಾರಿಗಳು, ಸೇತುವೆ ಮತ್ತು ಅಣೆಕಟ್ಟಿನ ಕುಸಿತದ ಫೋಟೋಗಳು ಈಗಾಗಲೇ ವ್ಯಾಪಕವಾದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶದಲ್ಲಿ ಕೆಲವು ಪ್ರದೇಶಗಳನ್ನು ರಕ್ಷಣಾಕಾರರು ಹೇಗೆ ತಲುಪುತ್ತಾರೆ ಎಂಬುದರ ಕುರಿತು ಮತ್ತಷ್ಟು ಕಳವಳವನ್ನು ಹುಟ್ಟುಹಾಕಿದೆ.

ಮಧ್ಯ ಬ್ಯಾಂಕಾಕ್‌ನಾದ್ಯಂತ ಸೈರನ್‌ಗಳು ಕೂಗುತ್ತಿದ್ದಂತೆ ಥೈಲ್ಯಾಂಡ್ ನಡುಗಿತು. ಥೈಲ್ಯಾಂಡ್‌ನಲ್ಲಿ ಮಧ್ಯ ಬ್ಯಾಂಕಾಕ್‌ನಾದ್ಯಂತ ಸೈರನ್‌ಗಳ ಶಬ್ದ ಕೇಳಿಬರುತ್ತಿತ್ತು. ವಾಹನಗಳು ಬೀದಿಗಳಲ್ಲಿ ತುಂಬಿದ್ದವು. ಇದರಿಂದಾಗಿ ನಗರದ ಕೆಲವು ಬೀದಿಗಳು ದಟ್ಟಣೆಯಿಂದ ಕೂಡಿದ್ದವು.
ಮೇಘಾಲಯ ಮತ್ತು ಹಲವಾರು ಈಶಾನ್ಯ ರಾಜ್ಯಗಳು, ಬಾಂಗ್ಲಾದೇಶ ಮತ್ತು ಚೀನಾದ ನೈಋತ್ಯ ಯುನ್ನಾನ್ ಪ್ರಾಂತ್ಯದಲ್ಲೂ ಬಲವಾದ ಭೂಕಂಪ ಸಂಭವಿಸಿವೆ. ಭೂಕಂಪದ ಪರಿಣಾಮ ಎಷ್ಟಿತ್ತೆಂದರೆ, ಸುಮಾರು 900 ಕಿ.ಮೀ ದೂರದಲ್ಲಿರುವ ಬ್ಯಾಂಕಾಕ್‌ನ ಚತುಚಕ್ ಜಿಲ್ಲೆಯಲ್ಲಿ ಒಂದು ಎತ್ತರದ ಕಟ್ಟಡ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದರು. ಹಲವರು ಇನ್ನೂ ಸಿಲುಕಿಕೊಂಡಿದ್ದಾರೆ. ಕಂಪನದಿಂದಾಗಿ ಜನರು ತಮ್ಮ ಮನೆಗಳಿಂದ ಹೊರಗೆ ಓಡಿಹೋಗಬೇಕಾಯಿತು ಮತ್ತು ಎತ್ತರದ ಕಟ್ಟಡಗಳಿಂದ ನೀರು ಹರಿಯಿತು.

ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ, ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ರಾಜಧಾನಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಮಧ್ಯಾಹ್ನ ಮ್ಯಾನ್ಮಾರ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಥೈಲ್ಯಾಂಡ್ ಮತ್ತು ಚೀನಾದಲ್ಲಿ ಕೂಡ ಭೂಕಂಪನ ಉಂಟಾಗಿದೆ. ಮಂಡಲೆ ಬಳಿ ಕೇಂದ್ರೀಕೃತವಾದ ಭೂಕಂಪದ ನಂತರ 6.4 ತೀವ್ರತೆಯ ನಂತರದ ಕಂಪನ ಸಂಭವಿಸಿದೆ. ಮ್ಯಾನ್ಮಾರ್‌ನ ಸೇನೆ ಮಂಡಲೆ ಮತ್ತು ನೇಪಿಟಾವ್ ಸೇರಿದಂತೆ 6 ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ರಕ್ಷಣಾ ಪ್ರಯತ್ನಗಳನ್ನು ಪ್ರಾರಂಭಿಸಿದೆ.
ಯಾನಾನ್-ಮಂಡಲೆ ಹೆದ್ದಾರಿಯಲ್ಲಿ ಉದ್ದಕ್ಕೂ ರಸ್ತೆ ಬಿರುಕು ಬಿಟ್ಟಿದೆ, ಕಟ್ಟಡಗಳು, ಸೇತುವೆ ಮತ್ತು ರೈಲ್ವೆ ಸೇತುವೆಗಳು ಕುಸಿದಿವೆ. ದೊಡ್ಡ ದೊಡ್ಡ ಅಣೆಕಟ್ಟುಗಳ ಸುರಕ್ಷತೆಯ ಬಗ್ಗೆ ಈಗ ಕಳವಳ ಶುರುವಾಗಿದೆ. ತೀವ್ರ ಭೂಕಂಪದ ಪರಿಣಾಮವಾಗಿ ಈ ಅಣೆಕಟ್ಟೆಗಳಿಗೆ ಹಾನಿಯಾಗಿರಬಹುದು ಎಂಬ ಭೀತಿಯಿದೆ.