ಸಾಯಿಸಲು ರೌಡಿಶೀಟರ್‌ಗೆ 70 ಲ.ರೂ. ಸುಪಾರಿ ನೀಡಿದ್ದಾರೆ ಎಂದು ಆರೋಪ
ತುಮಕೂರು: ಸದನದಲ್ಲಿ ಹನಿಟ್ರ್ಯಾಪ್ ಬಾಂಬ್ ಸಿಡಿಸಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರು ತನ್ನ ಹತ್ಯೆಗೆ ಯತ್ನ ನಡೆಯುತ್ತಿದೆ ಎಂದು ತುಮಕೂರಿನಲ್ಲಿ ದೂರು ದಾಖಲಿಸಿದ್ದಾರೆ.
ರಾಜೇಂದ್ರ ನೀಡಿದ ದೂರಿನ ಪ್ರಕಾರ ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ರೌಡಿ ಶೀಟರ್ ಸೋಮು ಸೇರಿದಂತೆ ಐದು ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಭರತ್, ಅಮಿತ್, ಗುಂಡಾ ಮತ್ತು ಯತೀಶ್ ಇತರ ಆರೋಪಿಗಳು. ಆರೋಪಿಗಳನ್ನು ಶೀಘ್ರದಲ್ಲೇ ತನಿಖೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಜ್ಞಾತ ವ್ಯಕ್ತಿಗಳು ತನ್ನನ್ನು ಕೊಲ್ಲಲು ಸುಪಾರಿ ನೀಡಿದ್ದಾರೆ ಎಂದು ಆರೋಪಿಸಿರುವ ರಾಜೇಂದ್ರ ಶುಕ್ರವಾರ ತುಮಕೂರು ಎಸ್‌ಪಿ ಅಶೋಕ್ ಕೆ.ವಿ ಅವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳುವಂತೆ ಕೋರಿದರು.
ತುಮಕೂರಿನ ಜಯಪುರ ಪ್ರದೇಶದ ರೌಡಿಶೀಟರ್ ಸೋಮ ಮತ್ತು ಭರತ್ ಎಂಬಿಬ್ಬರ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ. ಜನವರಿಯಲ್ಲಿಯೇ ಕೊಲ್ಲಲು ಸುಪಾರಿ ನೀಡಲಾಗಿದೆ ಎಂದು ತಿಳಿದಿದ್ದರೂ ಪೊಲೀಸ್ ದೂರು ದಾಖಲಿಸಲು ಏಕೆ ವಿಳಂಬ ಮಾಡಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಸುಪಾರಿ ಡೀಲ್ ಬಗ್ಗೆ ಎಂಎಲ್‌ಸಿ ರಾಜೇಂದ್ರ ದೂರು ನೀಡಿದ ನಂತರವೇ ನಮಗೆ ತಿಳಿದುಬಂದಿತು, ನಮಗೆ ಯಾವುದೇ ಗುಪ್ತಚರ ವರದಿ ಬಂದಿರಲಿಲ್ಲ. ಸಚಿವರು ಮತ್ತು ಎಂಎಲ್‌ಸಿಗೆ ಈಗಾಗಲೇ ಸಾಕಷ್ಟು ಭದ್ರತೆ ಇದೆ ಮತ್ತು ಅದನ್ನು ಬಿಗಿಗೊಳಿಸಲಾಗುವುದು ಎಂದು ತಿಳಿಸಿದರು. ಕಳೆದ ಜನವರಿಯಲ್ಲಿ ಹತ್ಯೆಗೆ ಸುಪಾರಿ ನೀಡಿರುವ ಆಡಿಯೊ ಟೇಪ್ ನನ್ನ ಗಮನಕ್ಕೆ ಬಂದಿದೆ. ಆದರೆ ಅದನ್ನು ಗಂಭೀರವಾಗಿ ಪರಿಗಣಿಸದ ಕಾರಣ ಪೊಲೀಸರಿಗೆ ದೂರು ನೀಡಲು ವಿಳಂಬ ಮಾಡಿದ್ದೇನೆ ಎಂದು ರಾಜೇಂದ್ರ ತಿಳಿಸಿದ್ದಾರೆ. ಆರೋಪಿಗಳು ನನ್ನ ಕಾರಿಗೆ ಜಿಪಿಎಸ್ ಅಳವಡಿಸಲು ಪ್ರಯತ್ನಿಸಿದ್ದಾರೆ. 70 ಲಕ್ಷ ರೂ. ಸುಪಾರಿ ಮೊತ್ತದಲ್ಲಿ 5 ಲಕ್ಷ ರೂ. ಪಾವತಿಸಲಾಗಿದೆ. ಅವರು ಅದನ್ನು ಏಕೆ ನೀಡಿದ್ದಾರೆಂದು ನನಗೆ ತಿಳಿದಿಲ್ಲ. ಸೋಮ ಮತ್ತು ಭರತ್ ಹೆಸರುಗಳು ಆಡಿಯೊದಲ್ಲಿವೆ. ಅವರು ಯಾರೆಂದು ನನಗೆ ತಿಳಿದಿಲ್ಲ ಆದರೆ ಒಬ್ಬ ಮಹಿಳೆ ಮತ್ತು ಹುಡುಗ ಅದರ ಬಗ್ಗೆ ಮಾತನಾಡುತ್ತಿರುವ 18 ನಿಮಿಷಗಳ ಆಡಿಯೋ ಇದೆ ಎಂದು ಜನವರಿಯಲ್ಲಿ ನನಗೆ ಆಡಿಯೊ ಸಿಕ್ಕಿತು. ನಾನು ಅದನ್ನು ತಮಾಷೆ ಎಂದು ಭಾವಿಸಿ ಸುಮ್ಮನಾಗಿದ್ದೆ, ಆದರೆ ಅದು ಗಂಭೀರವಾಗಿದೆ ಎಂದು ನನಗೆ ತಿಳಿದ ನಂತರ ದೂರು ದಾಖಲಿಸಿದೆ ಎಂದು ಅವರು ತಿಳಿಸಿದ್ದಾರೆ.