ಪುತ್ತೂರು : ಸುಳ್ಯದ ಡೆಂಟಲ್ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿಯೋರ್ವರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರ ಪ್ರಕರಣಕ್ಕೆ ಸಂಬಂಧಿಸಿದ ವಸತಿನಿಲಯ ಮೇಲ್ವಿಚಾರಕಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ವಿದ್ಯಾರ್ಥಿನಿಯ ತಂದೆ ಬೆಳಗಾವಿ ಜಿಲ್ಲೆಯ ಅಥೇನಿ ತಾಲೂಕಿನ ಸಿದ್ಧಪ್ಪ ಶಿವಪ್ಪ ನಿಡೋಣಿ ಅವರು ಫೆ.27ರಂದು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನ್ನ ಮಗಳು ವಿದ್ಯಾಭ್ಯಾಸ ಮಾಡುತ್ತಿರುವ ವೇಳೆ ಅದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನವೀನ್ ಎಂಬ ವಿದ್ಯಾರ್ಥಿಯು ಮಗಳಿಗೆ ಫೋನ್ ಮಾಡಿ, ನಿನ್ನ ಫೋಟೋಸ್ ಮತ್ತು ವಿಡಿಯೋಗಳನ್ನು ನಿನ್ನ ತಂದೆಗೆ ಹಾಗೂ ಸಹೋದರನಿಗೆ ಕಳುಹಿಸುತ್ತೇನೆಂದು ಪದೇ ಪದೇ ಬೆದರಿಕೆ ಹಾಕುತ್ತಿದ್ದುದರಿಂದ ಮಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ವಿದ್ಯಾರ್ಥಿ ನವೀನ ನೀಡುತ್ತಿದ್ದ ಕಿರುಕುಳ ಕಾರಣವಾಗಿದೆ ಮತ್ತು ಮಗಳು ವಾಸಿಸಿಕೊಂಡು ಬರುತ್ತಿದ್ದ ‘ನರ್ಮಾದ’ ವಸತಿ ನಿಲಯದ ಮೇಲ್ವಿಚಾರಕಿ ತಾರಾಕುಮಾರಿಗೆ ವಿಷಯ ತಿಳಿದಿದ್ದರೂ ಆ ಬಗ್ಗೆ ನನಗೆ ಮಾಹಿತಿಯನ್ನು ನೀಡದೆ ಕರ್ತವ್ಯ ಲೋಪ ಎಸಗಿ ತನ್ನ ಮಗಳ ಸಾವಿಗೆ ಕಾರಣರಾಗಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತಾದ ಪ್ರಕರಣ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣದ ಆರೋಪಿ ತಾರಾ ಕುಮಾರಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸರಿತಾ ಡಿ ಅವರು ಆರೋಪಿ ತಾರಾ ಕುಮಾರಿಯವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಸುಳ್ಯದ ಹಿರಿಯ ನ್ಯಾಯವಾದಿ ಯಂ. ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ ಬಿ.ಜಿ ಹಾಗು ಶಾಮಪ್ರಸಾದ್ ನಿಡ್ಯಮಲೆ ವಾದಿಸಿದ್ದಾರೆ.