ಪುತ್ತೂರು: ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ’ ಎಂಬ ಶಿರೋನಾಮೆಯಲ್ಲಿ ‘ಜಾನಪದ ಉತ್ಸವ-2025’ ನಡೆಯಿತು.

ಉಡುಪಿಯ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಮತ್ತು ಸಹಾಯಕ ಪ್ರಾಧ್ಯಾಪಕಿ ಡಾ. ಹರಿಣಾಕ್ಷಿ ಎಂ.ಡಿ.ಯವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ತುಳುನಾಡ ಜಾನಪದ ಸಂಸ್ಕೃತಿ ಶ್ರೇಷ್ಠವಾಗಿದ್ದು ಅದು ಭಾರತೀಯ ಸಂಸ್ಕೃತಿಗೆ ಪ್ರಮುಖ ಕೊಡುಗೆಯಾಗಿದೆ. ಜನಪದ ಸಾಹಿತ್ಯದ ಪ್ರಕಾರಗಳಾದ ಗಾದೆ, ಒಗಟು, ಪಾಡ್ದನ ಮತ್ತು ಕತೆಗಳು ಜೀವನ ಮೌಲ್ಯಗಳನ್ನು ತಲೆಮಾರುಗಳ ಮೂಲಕ ದಾಟಿಸುವ ಪ್ರಮುಖ ಮಾಧ್ಯಮಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಮಾತನಾಡಿ, ಸಂಸ್ಕೃತಿಯ ಉಳಿವು ಸಾಮೂಹಿಕ ಜವಾಬ್ದಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜು ಇಂತಹ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಎಂದರು.

ಪ್ರೊ. ಹರೀಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಜಾನಪದ ಸಾಹಿತ್ಯವು ಸೌಹಾರ್ದಯುತ ಬದುಕಿಗೆ ಬೆನ್ನೆಲುಬಾಗಿದೆ. ಕೌಟುಂಬಿಕ ಸಂತೋಷ ಮತ್ತು ಆಯಾಸ ಪರಿಹಾರಗಳಿಗೆ ಅತ್ಯುತ್ತಮ ಆಕರವಾಗಿವೆ ಎಂದರು.
ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಸಂಸ್ಕೃತಿ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ರಕ್ಷಿತಾ, ಗ್ರಂಥಪಾಲಕಿ ಜಯಶ್ರೀ ಮತ್ತು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಸಭೆಯ ಬಳಿಕ ಅಡಿಕೆ ಹಾಳೆ ಎಳೆಯುವುದು, ಲಗೋರಿ, ದೈಹಿಕ ಸಮತೋಲನದ ಓಟ ಮತ್ತು ಗೋಣಿಚೀಲ ಓಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.