ಹಣ ಕೊಟ್ಟರೂ ಕರೆ ಮಾಡಿ ಬೆದರಿಕೆಯೊಡ್ಡುತ್ತಿದ್ದ ವಂಚಕರು
ಬೆಂಗಳೂರು: ಸೈಬರ್ ವಂಚಕರ ಕಾಟ ತಾಳಲಾರದೆ ವೃದ್ಧ ದಂಪತಿ ಸಾವಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ. ಡಯಾಗೊ ಸಂತಾನ್ ನಜರೆತ್ (82) ಮತ್ತು ಫ್ಲೇವಿಯಾನಾ ನಜರೆತ್ (79) ಆತ್ಮಹತ್ಯೆಗೆ ಶರಣಾದ ದಂಪತಿ. ಆತ್ಮಹತ್ಯೆಗೆ ಮುನ್ನ ದಂಪತಿ ಡೆತ್‌ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸೈಬರ್ ವಂಚನೆಯ ಮಾಹಿತಿ ನೀಡಿದ್ದಾರೆ.
ಫ್ಲೇವಿಯಾನಾ ನಜರೆತ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರೆ, ಡಯಾಗೊ ಚಾಕುವಿನಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಯಾಗೋ ಮಹಾರಾಷ್ಟ್ರ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಸೈಬರ್ ವಂಚಕರು ಬೆದರಿಕೆ ಕರೆ ಮಾಡಿ ಡಯಾಗೊ ಅವರಿಂದ 5 ಲಕ್ಷ ರೂ. ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಮತ್ತೆ ಮತ್ತೆ ಹಣಕ್ಕೆ ಕಿರುಕುಳ ನೀಡುತ್ತಿದ್ದರು. ಇದರಿಂದ ತಮ್ಮ ಜೀವನವನ್ನು ಕೊನೆಗೊಳಿಸಲು ದಂಪತಿ ನಿರ್ಧರಿಸಿದ್ದರು. ಡೆತ್‌ನೋಟ್‌ನಲ್ಲಿ ದಂಪತಿ ಕೆಲವು ವ್ಯಕ್ತಿಗಳಿಂದ ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ. ಅದನ್ನು ತಮ್ಮ ಆಸ್ತಿಗಳನ್ನು ಮಾರಿ ಮರುಪಾವತಿಸಬೇಕೆಂದು ಹೇಳಿದ್ದಾರೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ದೆಹಲಿ ಕ್ರೈಂ ಬ್ರ್ಯಾಂಚ್‍ನಿಂದ ನಮಗೆ ವೀಡಿಯೊ ಕರೆ ಮಾಡಿ ನೀವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಕೆ ಹಾಕಲಾಗಿತ್ತು. ಬಳಿಕ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಭಯಗೊಂಡು ನಾವು ಅವರು ಹೇಳಿದ ಖಾತೆಗೆ ಹಣ ಹಾಕಿದ್ದೆವು. ಹಣ ಪಾವತಿ ಮಾಡಿದ ಬಳಿಕವೂ ಮತ್ತೆ ವೀಡಿಯೊ ಕಾಲ್ ಮಾಡಿ ಹಣ ನೀಡಬೇಕು. ಒಂದು ವೇಳೆ ಹಣ ನೀಡದಿದ್ದರೆ ಅರೆಸ್ಟ್ ಮಾಡುತ್ತೇವೆ ಎಂದು ಬೆದರಿಸಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದಿಟ್ಟಿದ್ದಾರೆ. ಡಯಾಗೋ ನಿವೃತ್ತಿಯ ಬಳಿಕ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮತ್ತು ಇತರ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದ್ದರು.