ಪುತ್ತೂರು: ಬೀಡಿಕಾರ್ಮಿಕರ ಕನಿಷ್ಟ ವೇತನವನ್ನು ಹಿಮ್ಮುಖವಾಗಿ 315 ರಿಂದ 270 ಕ್ಕೆ ಇಳಿಸಿ ಹೊಸ ಆದೇಶ ಮಾಡಿದ ರಾಜ್ಯ ಸರಕಾರದ ನಡೆಯನ್ನು ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘದ (ಸಿಐಟಿಯು) ಅಧ್ಯಕ್ಷ, ನ್ಯಾಯವಾದಿ ಪಿ.ಕೆ.ಸತೀಶನ್ ಮತ್ತು ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿರುವ ಸುಮಾರು 7 ಲಕ್ಷ ಬೀಡಿ ಕಾರ್ಮಿಕರಿಗೆ ರಾಜ್ಯ ಸರಕಾರ ಅನ್ಯಾಯ ಮಾಡುತ್ತಿದೆ. ಈ ಹಿಂದೆ ಬೀಡಿ ಉದ್ಯಮದಲ್ಲಿನ ಕಾರ್ಮಿಕರಿಗೆ ಕನಿಷ್ಟ ವೇತನವನ್ನು ಕನಿಷ್ಟ ವೇತನ ಕಾಯ್ದೆ ಕಲಂ 5(1)ಎ ಸಮಿತಿಯಲ್ಲಿ ಬೀಡಿ ಮಾಲಕರ ಪ್ರತಿನಿಧಿಗಳು, ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಮತ್ತು ಸರಕಾರೀ ಅಧಿಕಾರಿಗಳು ಇದ್ದ ತ್ರಿಪಕ್ಷೀಯ ಸಮಿತಿಯೇ ಸರ್ವಾನುಮತದಿಂದ ವೇತನ ಮತ್ತು ಡಿ.ಎ. ನಿರ್ಧರಿಸಿತ್ತು. ಅದನ್ನು ಸರಕಾರ ತನ್ನ ನೀತಿಯ ಭಾಗವಾಗಿ ಸೇವಾ ಹಿರಿತನವನ್ನು ಒಳಗೊಂಡು ಅಧಿಸೂಚನೆ ಹೊರಡಿಸಿತ್ತು. ಆದರೆ ಬೀಡಿ ಮಾಲಕರು ಸೇವಾ ಹಿರಿತನ ಬಗ್ಗೆ ಸಮಿತಿ ತೀರ್ಮಾನಿಸಿಲ್ಲ ಎಂದು ಸದ್ರಿ ಸರಕಾರಿ ಆದೇಶದ ವಿರುದ್ದವೇ ಕರ್ನಾಟಕ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು.
2018 ರಿಂದ 2024 ತನಕ 6 ವರ್ಷಗಳ ಕಾಲ ಸುಮ್ಮನೆ ಎಳೆದಾಡಿಸಿ ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ ಜಾರಿ ಮಾಡದೆ ಬಡ ಬೀಡಿಕಾರ್ಮಿಕರ ಸಂಕಷ್ಟವನ್ನು ಹೆಚ್ಚಿಸಿದ್ದ ಬೀಡಿ ಮಾಲಕರು ಏಕಾಏಕಿ ನ.6, 2024 ರಂದು ರಿಟ್‌ಅರ್ಜಿಯನ್ನು ಹಿಂಪಡೆದಿದ್ದಾರೆ. ಮತ್ತೊಂದು ಕಡೆ ಸರಕಾರ ಜೊತೆಯಲ್ಲಿ ವ್ಯವಹಾರ ನಡೆಸಿ ತನ್ನ ಪರವಾಗಿ ಬೀಡಿ ಕಾರ್ಮಿಕರ ವಿರುದ್ದವಾಗಿ ಕನಿಷ್ಟ ಕೂಲಿ ಕಾಯ್ದೆಯ 5(1)ಎ ಹಿಂದಿನ ಸಮಿತಿಯ ಸದಸ್ಯರುಗಳ ಅಭಿಪ್ರಾಯವನ್ನೂ ಪಡೆಯದೆ ಸರಕಾರ ಏಕಪಕ್ಷೀಯವಾಗಿ ತನ್ನದೇ ಈ ಹಿಂದಿನ ಆದೇಶವನ್ನು ಹಿಂಪಡೆದು ತುಟ್ಟಿಭತ್ತ್ಯೆಯನ್ನು ಬೆಲೆಏರಿಕೆ ಆಧಾರದಲ್ಲಿ ಅಂಶ ಒಂದಕ್ಕೆ 4 ಪೈಸೆ ಇದ್ದುದ್ದನ್ನು 3 ಪೈಸೆಗೆ ಇಳಿಸಿ ಕಾರ್ಮಿಕರಿಗೆ ದ್ರೋಹ ಬಗೆದಿದೆ. ಸರಕಾರದ ಈ ನಡೆ ನ್ಯಾಯೋಜಿತವಲ್ಲ ಇದನ್ನು ಸಿಐಟಿಯು ಬಲವಾಗಿ ಖಂಡಿಸಿದೆ. ಬೆಲೆ ಏರಿಕೆಯಿಂದ ಬದುಕಲು ಸಾದ್ಯವಾಗುತ್ತಿಲ್ಲ ಎಂದು ಶಾಸಕ, ಮಂತ್ರಿಗಳ ಸಂಬಳ ಭತ್ತೆಯನ್ನು ಡಬಲ್ ಏರಿಸಿಕೊಂಡ ಇದೇ ಸರಕಾರ, ಇದೀಗ ಬೀಡಿ ಕಾರ್ಮಿಕರಿಗೆ ಮಾತ್ರಾ ಬೆಲೆ ಏರಿಕೆ ಆಗಿಲ್ಲ, ಹಣದುಬ್ಬರ ಆಗಿಲ್ಲ ಎಂದು ಹೇಳುವಂತಿದೆ ಈ ಆದೇಶ. ಬೀಡಿ ಮಾಲಕರಿಗೆ ಸಾವಿರಾರು ಕೋಟಿ ರೂಪಾಯಿ ಉಳಿಸಿಕೊಟ್ಟ ಈ ಆದೇಶದ ಹಿಂದೆ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಅನುಮಾನವನ್ನು ವ್ಯಕ್ತಪಡಿಸಿರುವ ಸಿಐಟಿಯು ಸಂಯೋಜಿತ ಬೀಡಿ ಕಾರ್ಮಿಕರ ಸಂಘಟನೆ ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಮದ್ಯಪ್ರವೇಶ ಮಾಡಿ ಸಮಗ್ರ ತನಿಖೆಗೆ ಆದೇಶಿಸುವಂತೆ ಮತ್ತು ಈ ಕಾರ್ಮಿಕ ವಿರೋದಿ ಆದೇಶವನ್ನು ವಜಾ ಮಾಡುವಂತೆ ಒತ್ತಾಯಿಸುತ್ತದೆ ಎಂದಿದ್ದಾರೆ.