ಕಥುವಾದಲ್ಲಿ ಐದು ದಿನಗಳಿಂದ ಉಗ್ರರ ವಿರುದ್ಧ ಕಾರ್ಯಾಚರಣೆ
ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಈ ಗುಂಡಿನ ಕಾಳಗದಲ್ಲಿ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ ಹಾಗೂ ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕಥುವಾದಲ್ಲಿ ಉಗ್ರ ಬೇಟೆ ನಡೆಯುತ್ತಿದ್ದು, ನಿನ್ನೆ ರಾತ್ರಿ ತೀವ್ರ ಕಾಳಗ ನಡೆದಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.
ಕಥುವಾ ಜಿಲ್ಲೆಯ ಜುಥಾನ ಸಮೀಪ ದಟ್ಟಾರಣ್ಯದಲ್ಲಿ ಐವರು ಉಗ್ರರು ಅವಿತಿರುವ ಕುರಿತು ಮಾಹಿತಿ ಸಿಕ್ಕಿದ ಬಳಿಕ ಇಲ್ಲಿ ಕಾರ್ಯಾಚರಣೆ ಶುರು ಮಾಡಲಾಗಿದೆ. ಮಾ.23ರಿಂದೀಚೆಗೆ ಇಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಹೀರಾನಗರ್ ಸೆಕ್ಟರ್‌ನಿಂದ ಸುಮಾರು 30 ಕಿ.ಮೀ. ದೂರವಿರುವ ಜಾಖೋಲೆ ಎಂಬಲ್ಲಿ ಕಾಡಿನೊಳಗೆ ಉಗ್ರರು ಅವಿತಿದ್ದು, ಅವರನ್ನು ಹೊರಗೆಳೆಯಲು ಭದ್ರತಾ ಪಡೆ ಪ್ರಯತ್ನಿಸುತ್ತಿದೆ. ಕಾರ್ಯಾಚರಣೆಗಾಗಿ ಹೆಚ್ಚುವರಿ ಪಡೆಗಳನ್ನು ರವಾನಿಸಲಾಗಿದೆ. ಕಳೆದ ಭಾನುವಾರ ಹೀರಾನಗರದಲ್ಲಿ ಭದ್ರತಾ ಪಡೆಗೆ ಮುಖಾಮುಖಿಯಾದ ಉಗ್ರರೇ ಕಾಡಿನೊಳಗೆ ಅವಿತುಕೊಂಡು ದಾಳಿ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಗಡಿ ಸಮೀಪ ಇದ್ದ ಉಗ್ರರು ಸುಮಾರು ಅರ್ಧ ತಾಸು ಗುಂಡಿನ ಕಾಳಗ ನಡೆಸಿ ಕಾಡಿನೊಳಗೆ ಪಲಾಯನ ಮಾಡಿದ್ದರು.