ಕುಮಾರಸ್ವಾಮಿ, ದೇವೇಗೌಡ ಭೇಟಿಯ ಹಿಂದಿನ ಮರ್ಮವೇನು?
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣ ಬಯಲಾದ ಬಳಿಕ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಕ್ಷಿಪ್ರ ಬೆಳವಣಿಗೆಗಳು ಕುತೂಹಲ ಹುಟ್ಟಿಸಿವೆ. ಅದರಲ್ಲೂ ಕರ್ನಾಟಕ ರಾಜಕೀಯ ವಲಯದಲ್ಲಿ ಸಾಹುಕಾರ್ ಎಂದೇ ಅರಿಯಲ್ಪಡುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದಿಲ್ಲಿಗೆ ಹೋದ ಬಳಿಕ ನಡೆದಿರುವ ವಿದ್ಯಮಾನಗಳು ಸಾವಿರ ಕುತೂಹಲ ಹುಟ್ಟಿಸಿವೆ.
ಹನಿಟ್ರ್ಯಾಪ್ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಬಹಳ ಹಗುರವಾಗಿ ಪರಿಗಣಿಸಿರುವುದರಿಂದ ಕೆರಳಿರುವ ಸತೀಶ್ ಜಾರಕಿಹೊಳಿ ಹೈಕಮಾಂಡ್ಗೆ ದೂರು ನೀಡುತ್ತೇನೆ ಎಂದು ದೆಹಲಿಗೆ ತೆರಳಿ ಅಲ್ಲಿ ಸದ್ದಿಲ್ಲದೆ ಎದುರಾಳಿ ಪಕ್ಷದ ನಾಯಕರನ್ನು ಭೇಟಿ ಮಾಡಿದ್ದಾರೆ. ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಇಂದು ಇನ್ನೂ ಇಬ್ಬರು-ಮೂವರು ನಾಯಕರ ಭೇಟಿ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ಸತೀಶ್ ಜಾರಕಿಹೊಳಿ ಯಾವ ದಾಳ ಉರುಳಿಸುತ್ತಾರೆ ಎಂಬ ಕುತೂಹಲವಿದೆ.
ಸತೀಶ್ ಜಾರಕಿಹೊಳಿ ನಡೆಯಿಂದ ರಾಜ್ಯದಲ್ಲಿ ಮತ್ತೊಮ್ಮೆ ಇತಿಹಾಸ ಮರುಕಳಿಸುತ್ತದೆಯೇ ಎಂಬ ಕುತೂಹಲವೂ ಇದೆ. ಏಕೆಂದರೆ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಸರಕಾರವನ್ನು ಕೆಡವಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೆ ತರುವಲ್ಲಿ ಇದೇ ಜಾರಕಿಹೊಳಿ ಕುಟುಂಬದ ಪಾತ್ರ ಮುಖ್ಯವಾಗಿತ್ತು. ಸತೀಶ್ ಜಾರಕಿಹೊಳಿಯವರ ಸಹೋದರ ರಮೇಶ್ ಜಾರಕಿಹೊಳಿಯವರ ನೇತೃತ್ವದಲ್ಲಿ 14 ಕಾಂಗ್ರೆಸ್ ಶಾಸಕರು ಪಕ್ಷಾಂತರ ಮಾಡಿದ ಪರಿಣಾಮ ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ರಚಿಸಿತ್ತು. ಈ ಪಕ್ಷಾಂತರದ ಹಿಂದೆ ಪ್ರೇರಕ ಶಕ್ತಿಯಾಗಿದ್ದವರು ಸಿದ್ದರಾಮಯ್ಯನವರು ಎಂಬ ಅನುಮಾನ ಈಗಲೂ ಇದೆ.
ನಂತರ ನಡೆದ ಬೆಳವಣಿಗೆಯಲ್ಲಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿ ಅವರು ಅಧಿಕಾರ ಬಿಡುವಂತೆ ಮಾಡಲಾಗಿತ್ತು. ಇದರಿಂದ ರಮೇಶ್ ಜಾರಕಿಹೊಳಿ ಮಾತ್ರವಲ್ಲದೆ ಇಡೀ ಜಾರಕಿಹೊಳಿ ಕುಟುಂಬಕ್ಕೆ ಅವಮಾನವಾಗಿತ್ತು. ಜಾರಕಿಹೊಳಿ ಸಹೋದರರು ರಾಜಕೀಯವಾಗಿ ಬೇರೆ ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ ಕೌಟುಂಬಿಕ ಸಂಬಂಧವನ್ನು ಗಟ್ಟಿಯಾಗಿ ಉಳಿಸಿಕೊಂಡಿದ್ದಾರೆ. ರಮೇಶ್ ಜಾರಕಿಹೊಳಿಗಾದ ಹನಿಟ್ರ್ಯಾಪ್ ಅವಮಾನ ಇಡೀ ಕುಟುಂಬಕ್ಕಾದ ಅವಮಾನ ಎಂಬ ಸಿಟ್ಟು ಇನ್ನೂ ಈ ಸಹೋದರರಲ್ಲಿದೆ. ಹೀಗಾಗಿ ಹಳೇ ದ್ವೇಷ ಸಾಧನೆಗೆ ಸತೀಶ್ ಜಾರಕಿಹೊಳಿ ಮುಂದಾದರಾ?
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಈಗ ಕೇಂದ್ರ ಸಚಿವರು. ಮತ್ತೊಂದೆಡೆ ರಾಜ್ಯ ಕಾಂಗ್ರೆಸ್ ಸರಕಾರದ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ. ಇವರಿಬ್ಬರ ಭೇಟಿ ಈಗ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ದೆಹಲಿಯಲ್ಲಿ ಕುಮಾರಸ್ವಾಮಿ ಜತೆ ಸತೀಶ್ ಜಾರಕಿಹೊಳಿ ಡಿನ್ನರ್ ಮೀಟಿಂಗ್ ಮಾಡಿದ್ದಾರೆ, ದೇವೇಗೌಡರ ಜತೆಗೂ ಗುಪ್ತ ಸಭೆ ನಡೆಸಿದ್ದಾರೆ. ಈ ಭೇಟಿಯ ಅಜೆಂಡಾ ಏನು? ಈ ಭೇಟಿಯ ಬಳಿಕ ರಾಜಕೀಯದ ಯಾವ ದಾಳ ಉರುಳುತ್ತೆ ಎಂಬುದು ಎಂಬ ಕುತೂಹಲ ಇದೆ. ಬೆಂಗಳೂರಿಗೆ ಬಂದಮೇಲೆ ಎಲ್ಲವನ್ನೂ ಹೇಳುತ್ತೇನೆ ಎಂದು ಸತೀಶ್ ಹೇಳಿದ್ದು ಕುತೂಹಲ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.
ಕುಮಾರಸ್ವಾಮಿ ಹಾಗೂ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಊಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗರಂ ಆಗಿದ್ದಾರೆ. ನಾನು ಕಾಂಗ್ರೆಸ್ ವಕ್ತಾರನಲ್ಲ ಅಧ್ಯಕ್ಷ, ಅವರದ್ದು ಯಾವ ರೀತಿಯ ಭೇಟಿ ಎಂದು ಅವರನ್ನೇ ಕೇಳಿ ಎಂದು ಮುಗುಮ್ಮಾಗಿ ಉತ್ತರಿಸಿದ್ದಾರೆ. ಈ ಮಧ್ಯೆ ಸಚಿವ ಮಹದೇವಪ್ಪ, ‘ಗುಡಿಸಲಿಗೆ ಬೆಂಕಿ ಹಚ್ಚಬೇಡಿ’ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿರುವುದು ಏನೋ ನಡೆಯುತ್ತಿದೆ ಎಂಬ ಗುಮಾನಿಗೆ ಕಾರಣವಾಗಿದೆ. ಸತೀಶ್ ಜಾರಕಿಹೊಳಿ ಹಾಗೂ ಡಿಕೆಶಿ ಮಧ್ಯೆ ಹಲವು ಸಮಯದಿಂದ ಅಸಮಾಧಾನ ಹೊಗೆಯಾಡುತ್ತಲಿದೆ. ಹೀಗಾಗಿ ದಳಪತಿಗಳ ಜತೆ ಭೇಟಿ ಡಿಕೆಶಿ ವಿರೋಧಿ ಶಕ್ತಿಗಳನ್ನು ಒಗ್ಗೂಡಿಸುವ ಯತ್ನ ಇರಬಹುದಾ, ಇದು ಸಿದ್ದರಾಮಯ್ಯನವರದ್ದೇ ತಂತ್ರಗಾರಿಕೆಯಾ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.