ಬೆಳ್ತಂಗಡಿ: ತಾಲೂಕು ವ್ಯಾಪ್ತಿಯ ಪದ್ಮುಂಜ ಸರಕಾರಿ ಪ್ರೌಢಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಿಂದ 2 ಹೆಣ್ಣುಮಕ್ಕಳನ್ನು ಅವಕಾಶ ವಂಚಿತರಾಗಿಸಿದ ಘಟನೆ ವರದಿಯಾಗಿದೆ
ಖಾಸಗಿ ಶಾಲೆಗಳು 100% ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಬತ್ತನೇ ತರಗತಿಯಿಂದಲೇ ಬೇರೆ ಶಾಲೆಗೆ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳು ಸಹಜವಾಗಿ ಬರುತ್ತಾ ಇದ್ದು, ಸರಕಾರಿ ಶಾಲೆಯು ಎಲ್ಲಾ ತರಹದ ಮಕ್ಕಳಿಗೂ ಸಮಾನ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಪೂರಕವಾಗಿ ನಡೆದು ಬರುತ್ತಿರುವ ಕಡೆ, ಈ ಶೈಕ್ಷಣಿಕ ವರ್ಷದಲ್ಲಿ ಪದ್ಮುಂಜದ ಸರಕಾರಿ ಶಾಲೆಯ ಶಿಕ್ಷಕ ವೃಂದ ಕೂಡ 100% ಎನ್ನುವ ಗೀಳಿಗೆ ಬಿದ್ದು ಎರಡು ಹೆಣ್ಣು ಮಕ್ಕಳನ್ನು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎನ್ನುವ ಕಾರಣಕ್ಕೆ ಪರೀಕ್ಷೆಗೆ ಅವಕಾಶ ಕೊಡದೆ ಇರುವುದು ಅಕ್ಷಮ್ಯ ಅಪರಾಧವಾಗಿದೆ.
ಇದರ ಬಗ್ಗೆ ಖುದ್ದು ಅವಕಾಶ ವಂಚಿತಳಾಗಿರುವ ಹೆಣ್ಣು ಮಗಳು ಮಕ್ಕಳ ಹಕ್ಕುಗಳ ಆಯೋಗ, ಉಪನಿರ್ದೇಶಕರು, ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಎಸ್ ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕರಿಗೆ ಪತ್ರ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ.
ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ, ತಪ್ಪಿತಸ್ಥರಾದ ಶಿಕ್ಷಕರ ಮೇಲೆ ಕಾನೂನು ಕ್ರಮವನ್ನು ಕೈ ಗೊಳ್ಳುವುದರೊಂದಿಗೆ ಆ ಮಕ್ಕಳಿಗೆ ಇನ್ನುಳಿದ ಪರೀಕ್ಷೆ ಬರೆಯಲು ಕೂಡಲೇ ವ್ಯವಸ್ಥೆ ಮಾಡಿಕೊಡಲು ಕರ್ನಾಟಕ ರಾಜ್ಯ ಎಸ್ ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯ ಸಂಚಾಲಕ ಮೊಯ್ದಿನ್ ಕುಟ್ಟಿ ಆಗ್ರಹಿಸಿದ್ದಾರೆ