ರಾಜ್ಯದ ಇತರೆಡೆಗಳಿಗೂ ಹರಡಿದೆ ಚಿನ್ನ ಕಳ್ಳ ಸಾಗಾಟ ಜಾಲ
ಬೆಂಗಳೂರು: ಕನ್ನಡದ ನಟಿ ರನ್ಯಾ ರಾವ್ ಮುಖ್ಯ ಆರೋಪಿಯಾಗಿರುವ ಗೋಲ್ಡ್ ಸ್ಮಗ್ಲಿಂಗ್ ಕೇಸಿಗೆ ಸಂಬಂಧಪಟ್ಟು ಮೂರನೇ ಆರೋಪಿಯನ್ನು ಬಂಧಿಸಲಾಗಿದೆ. ಬಳ್ಳಾರಿ ಮೂಲದ ಸಾಹಿಲ್ ಜೈನ್ ಸೆರೆಯಾಗಿರುವ ಆರೋಪಿ. ರನ್ಯಾ ರಾವ್ ಜೊತೆಗೆ ವಾಟ್ಸಾಪ್ ಚಾಟಿಂಗ್ ಮಾಡಿದ್ದ ಹಿನ್ನೆಲೆ ಸಾಹಿಲ್ ಜೈನ್ ಮೇಲೆ ತನಿಖಾಧಿಕಾರಿಗಳು ಕಣ್ಣಿಟ್ಟಿದ್ದರು. ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್ ಅವರ ಸಹೋದರರ ಬಟ್ಟೆ ಮಳಿಗೆ ಬಳ್ಳಾರಿಯಲ್ಲಿದ್ದು, ಸಹೋದರರು ಬಳ್ಳಾರಿಯಲ್ಲಿ ವಾಸವಾಗಿದ್ದಾರೆ. ಆದರೆ ಕೆಲ ವರ್ಷಗಳಿಂದ ಸಾಹಿಲ್ ಜೈನ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗಿದೆ.
ಸಾಹಿಲ್ ಚಿಕ್ಕಂದಿನಿಂದಲೇ ಸೋದರ ಮಾವನ ಜೊತೆಯಲ್ಲಿ ಮುಂಬಯಿಯಲ್ಲಿ ವಾಸ ಮಾಡುತ್ತಿದ್ದ. ಈಗಾಗಲೇ ಇದೇ ರೀತಿಯ ಪ್ರಕರಣದಲ್ಲಿ ಸಾಹಿಲ್ ಮುಂಬಯಿಯಲ್ಲಿ ಒಮ್ಮೆ ಬಂಧನಕ್ಕೆ ಒಳಗಾಗಿದ್ದ. ಕಸ್ಟಮ್ಸ್ ಅಧಿಕಾರಿಗಳು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ಈಗಿನ ಪ್ರಕರಣ ಮತ್ತು ಹಿಂದಿನ ಪ್ರಕರಣದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತಿದ್ದ ಹಾಗೂ ಹವಾಲಾ ನಂಟಿನ ಆರೋಪದಲ್ಲಿ ಸಾಹಿಲ್ ಜೈನ್ ಬಂಧಿತನಾಗಿದ್ದ. ಚಿನ್ನದ ವ್ಯಾಪಾರಿಗಳ ಜೊತೆ ನಂಟು ಇರುವ ಹಿನ್ನೆಲೆಯಲ್ಲಿ ಚಿನ್ನದ ಮಾರಾಟದ ಜವಾಬ್ದಾರಿಯೂ ಸಾಹಿಲ್ ಮೇಲಿತ್ತು. ಸದ್ಯ ಸಾಹಿಲ್ ಜೈನ್ ವಶಕ್ಕೆ ಪಡೆದಿರುವ ಡಿಆರ್‌ಐ ಅಧಿಕಾರಿಗಳು ಸಾಹಿಲ್ ಜೈನ್ ತಂದೆ ಮಹೇಂದ್ರ ಜೈನ್‌ಗೂ ನೋಟಿಸ್ ಕೊಟ್ಟಿದ್ದಾರೆ.

ರನ್ಯಾ ರಾವ್‌ಗೆ ಹವಾಲ ನಂಟು
ಗೋಲ್ಡ್ ಸ್ಮಗ್ಲಿಂಗ್‌ನ ಹಣದ ವ್ಯವಹಾರ ಹವಾಲ ಮೂಲಕ ನಡೆಯುತ್ತಿತ್ತು. ಒಂದು ಕೆಜಿ ಚಿನ್ನ ಸಾಗಿಸಿದರೆ ಇಂತಿಷ್ಟು ಮೊತ್ತ ಕಮಿಷನ್ ಎಂದು ಸಿಗುತ್ತಿತ್ತು. ಇದನ್ನು ಹವಾಲ ಮೂಲಕ ಪಾವತಿಸಲಾಗುತ್ತಿತ್ತು. ಪ್ರತಿ ಸಲ ವಿದೇಶದಿಂದ ಬರುವಾಗ 4-5 ಕೆಜಿ ಚಿನ್ನವನ್ನು ರನ್ಯಾ ರಾವ್ ತರುತ್ತಿದ್ದಳು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಬೇರೆ ದೇಶಗಳಿಂದಲೂ ಕಳ್ಳ ಸಾಗಾಟ
ದುಬೈ ಮಾತ್ರವಲ್ಲ ದಕ್ಷಿಣಾ ಅಫ್ರಿಕಾದಿಂದಲೂ ಚಿನ್ನ ಕಳ್ಳ ಸಾಗಾಟ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ. ದುಬೈಗೆ ಮೊದಲು ಚಿನ್ನ ಸಾಗಾಟ ಮಾಡಿ ನಂತರ ಅದನ್ನು ಜಿನೇವಾಗೆ ಸಾಗಿಸುವ ನೆಪದಲ್ಲಿ ವಿಮಾನ ನಿಲ್ದಾಣದ ಒಳಗೆ ತಂದು ಭಾರತಕ್ಕೆ ರವಾನೆ ಮಾಡಲಾಗುತ್ತಿತ್ತು. ಈ ಬಗ್ಗೆ ಎರಡನೇ ಆರೋಪಿ ತರುಣ್ ಕೊಂಡೂರು ರಾಜು ಬಾಯಿಬಿಟ್ಟಿದ್ದಾನೆ. ಆತ ದಕ್ಷಿಣ ಅಫ್ರಿಕಾಗೆ ಹೋಗಲು ಅಲ್ಲಿಯ ಗೃಹ ಮಂತ್ರಾಲಯದಿಂದಲೂ ಅನುಮತಿ ಪಡೆಯುತ್ತಿದ್ದ.
ದುಬೈನಲ್ಲಿ ರನ್ಯಾ ರಾವ್ ಶುರು ಮಾಡಿದ್ದ ವೈರಾ ಡೈಮಂಡ್ ಕಂಪನಿಗೆ ಮೊದಲು ಚಿನ್ನ ಸಾಗಾಟ ಮಾಡಿ ಅಲ್ಲಿಂದ ತರುಣ್ ಅಮೆರಿಕ ಪಾಸ್‌ಪೋರ್ಟ್ ಬಳಸಿ ಏರ್‌ಪೋರ್ಟ್ ಒಳಗೆ ತಂದರೆ ರನ್ಯಾ ಚಿನ್ನ ಪಡೆದುಕೊಂಡು ಭಾರತಕ್ಕೆ ಬಂದು ಪ್ರೋಟೋಕಾಲ್ ಬಳಸಿ ನಗರಕ್ಕೆ ತರುತ್ತಿದ್ದಲೂ. ಇದು ಬಹಳ ಬುದ್ಧಿ ಉಪಯೋಗಿಸಿ ಹೆಣೆದ ಜಾಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.