ಯತ್ನಾಳ ಉಚ್ಚಾಟನೆಯಿಂದ ಆಗುವ ಪರಿಣಾಮ ಏನು?

ಸೋಷಿಯಲ್‌ ಮೀಡಿಯಾದಲ್ಲಿ ನಡೆಯುತ್ತಿದೆ ಪರ-ವಿರೋಧ ಚರ್ಚೆ

ಬೆಂಗಳೂರು : ಫಯರ್‌ಬ್ರಾಂಡ್‌ ನಾಯಕ ಎಂದು ಗುರುತಿಸಿಕೊಂಡಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರನ್ನು ಬಿಜೆಪಿ ಹೈಕಮಾಂಡ್‌ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆಪಾದನೆ ಹೊರಿಸಿ ಆರು ವರ್ಷದ ಮಟ್ಟಿಗೆ ಉಚ್ಚಾಟಿಸಿದ ಸಾಧಕ ಬಾಧಕಗಳ ಕುರಿತು ಭಾರಿ ಚರ್ಚೆಯಾಗುತ್ತಿದೆ.
ಉರಿ ನಾಲಗೆಯ ಯತ್ನಾಳ ಹಿಂದುತ್ವದ ಕಟ್ಟಾ ಪ್ರತಿಪಾದಕರಾಗಿದ್ದರು. ಎದುರಾಳಿಗಳನ್ನು ಮುಲಾಜಿಲ್ಲದೆ ಕಟುಶಬ್ದಗಳಲ್ಲಿ ಟೀಕಿಸುತ್ತಿದ್ದರು. ಇಂಥ ಟೀಕೆಗಳಿಂದ ಅವರು ಲೆಕ್ಕವಿಲ್ಲದಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರೂ ಇದಕ್ಕೆಲ್ಲ ಎದೆಗುಂದುವ ವ್ಯಕ್ತಿತ್ವ ಅವರದ್ದಲ್ಲ. ಅವರ ಟೀಕಾಸ್ತ್ರಗಳಿಗೆ ಸ್ವಪಕ್ಷದವರೂ ಗುರಿಯಾಗುತ್ತಿದ್ದರು. ಅದರಲ್ಲೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ಹಾಲಿ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧವಂತೂ ನಿತ್ಯ ಕೆಂಡಕಾರುತ್ತಿದ್ದರು. ಇದರಿಂದ ಅನೇಕ ಸಲ ಪಕ್ಷ ಇಕ್ಕಟ್ಟಿಗೆ ಸಿಲುಕಿದರೂ ಯತ್ನಾಳ ಕ್ಯಾರೇ ಎಂದಿರಲಿಲ್ಲ, ಹೈಕಮಾಂಡ್‌ ಎಚ್ಚರಿಕೆಯನ್ನೂ ಡೋಂಟ್‌ಕೇರ್‌ ಮಾಡಿದ್ದರು.

ಕೆಲವು ಬಿಜೆಪಿ ನಾಯಕರ ಅಡ್ಜಸ್ಟಮೆಂಟ್‌ ರಾಜಕೀಯದ ಬಗ್ಗೆ ಯತ್ನಾಳ ಬಹಿರಂಗವಾಗಿಯೇ ಕಿಡಿಕಾರುತ್ತಿದ್ದರು. ಇದು ಪಕ್ಷದೊಳಗೆ ಅವರಿಗೆ ಅನೇಕ ಶತ್ರುಗಳನ್ನು ಸೃಷ್ಟಿಸಿತ್ತು. ಆದರೆ ಇದೇ ವೇಳೆ ಕಟ್ಟಾ ಹಿಂದುತ್ವದ ನಿಲುವು ಮತ್ತು ಸತ್ಯವನ್ನು ನಿರ್ಭಿಡೆಯಿಂದ ಹೇಳುವ ಸ್ವಭಾವದಿಂದಾಗಿ ಅವರಿಗೆ ಲಕ್ಷಾಂತರ ಅಭಿಮಾನಿಗಳು ಮತ್ತು ಅನುಯಾಯಿಗಳು ಇದ್ದಾರೆ. ಬಿಜೆಪಿ ಉನ್ನತ ನಾಯಕರ ನಿಷ್ಕ್ರಿಯತೆ, ಒಳ ರಾಜಕೀಯ, ವಿಪಕ್ಷಗಳ ನಾಯಕರ ಜೊತೆಗಿನ ಹೊಂದಾಣಿಕೆ ಮುಂತಾದ ಕಾರಣಗಳಿಂದ ರೋಸಿ ಹೋಗಿರುವ ದೊಡ್ಡ ವರ್ಗವೊಂದು ಯತ್ನಾಳ ಜೊತೆಗಿದೆ.

































 
 

ಇಡೀ ರಾಜ್ಯದಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಇರುವ ಬೆರಳೆಣಿಕೆ ನಾಯಕರಲ್ಲಿ ಯತ್ನಾಳ ಕೂಡ ಒಬ್ಬರು. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ಗೆ ಸರಿಯಾಗಿ ಎದಿರೇಟು ಕೊಡುವ ನಾಯಕನಿದ್ದರೆ ಅದು ಯತ್ನಾಳ ಮಾತ್ರ, ಉಳಿದವರು ತಮ್ಮ ಲಾಭ ನಷ್ಟ ನೋಡಿಕೊಂಡು ಪ್ರತಿಕ್ರಿಯೆ ನೀಡುತ್ತಾರೆ. ಇದರಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ ಎಂಬ ಭಾವನೆ ಕಾರ್ಯಕರ್ತರಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಈಗ ಹೇಳಿಕೊಳ್ಳುವಂಥ ಬಲವನ್ನು ಹೊಂದಿಲ್ಲ. ಇಂತ ಪರಿಸ್ಥಿತಿಯಲ್ಲಿ ಯತ್ನಾಳ ಅವರನ್ನು ಉಚ್ಚಾಟಿಸಿರುವ ಕ್ರಮ ಎಷ್ಟು ಸರಿ ಎಂಬ ಚಿಂತೆ ಕಾರ್ಯಕರ್ತರನ್ನು ಕಾಡುತ್ತಿದೆ.

ಹಾಗೆಂದು ಯತ್ನಾಳಗೆ ಉಚ್ಚಾಟನೆ ಹೊದೇನೂ ಅಲ್ಲ. ಹಿಂದೆ ಎರಡು ಸಲ ಅವರು ಇದೇ ರೀತಿ ಪಕ್ಷ ವಿರೋಧಿ ಚಟುವಟಿಕ ಆರೋಪದಲ್ಲಿ ಉಚ್ಚಾಟಿತರಾಗಿ ಮರಳಿ ಪಕ್ಷ ಸೇರಿದ್ದರು. ಇದು ಮೂರನೇ ಬಾರಿಯ ಉಚ್ಚಾಟನೆ. 2009ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮತ್ತು ಸದಾನಂದಗೌಡ ವಿರುದ್ಧ ಮಾತನಾಡಿ 6 ವರ್ಷಗಳ ಕಾಲ ಪಕ್ಷದಿಂದ ಅಮಾನತು ಶಿಕ್ಷೆಗೆ ಒಳಗಾಗಿದ್ದರು. ನಂತರ ಜೆಡಿಎಸ್ ಸೇರಿ 2013ರಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡಿದ್ದರು. ಬಳಿಕ 2014ರಲ್ಲಿ ಯತ್ನಾಳ್​ ಮೇಲಿನ ಅಮಾನತು ಶಿಕ್ಷೆ ರದ್ದು ಮಾಡಿ ಪಕ್ಷಕ್ಕೆ ಕರೆತರಲಾಯಿತು.ಆ ವೇಳೆ ಯಡಿಯೂರಪ್ಪ ಬಿಜೆಪಿಯಲ್ಲಿರಲಿಲ್ಲ.

2014ರ ಲೋಕಸಭಾ ಚುನಾವಣೆ ಬಳಿಕ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಸಿಗದ ಕಾರಣ 2016ರಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಕಾರಣಕ್ಕೆ 2016ರಲ್ಲಿ 6 ವರ್ಷಗಳ ಕಾಲ ಎರಡನೇ ಬಾರಿ ಯತ್ನಾಳ್​ ಉಚ್ಚಾಟನೆ ಶಿಕ್ಷೆಗೆ ಗುರಿಯಾಗಿದ್ದರು. ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದು ಹೈಕಮಾಂಡ್​ಗೆ ತಮ್ಮ ಶಕ್ತಿ ತೋರಿಸಿದ್ದರು. ನಂತರ 2018ರಲ್ಲಿ ಅಮಾನತು ರದ್ದು ಮಾಡಿ ವಾಪಸ್ ಬಿಜೆಪಿಗೆ ಕರೆ ತರಲಾಗಿತ್ತು. ಹೀಗೆ ಎರಡು ಸಲ ಉಚ್ಚಾಟನೆಯಾಗಿ ಅವಧಿಯಾಗುವ ಮೊದಲೇ ಪಕ್ಷಕ್ಕೆ ಮರಳಿ ಬಂದಿರುವ ಯತ್ನಾಳಗೆ ಮೂರನೇ ಸಲವೂ ಆ ಅದೃಷ್ಟ ಇದೆಯಾ ಎನ್ನುವುದನ್ನು ಕಾದುನೋಡಬೇಕು?

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top