ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ರಥೋತ್ಸವದಂದು ಯಾವುದೇ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಸುರಕ್ಷತಾ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸ್ಟಾಲ್ ನವರಿಗೆ ಯಾವುದೇ ಕಾರಣ ವಿದ್ಯುತ್ ಸಂಪರ್ಕವಿಲ್ಲ. ದೇವಸ್ಥಾನದ ಆಸುಪಾಸಿನಲ್ಲಿ ಯಾವುದೇ ವಾಹನ ನಿಲುಗಡೆಗೂ ಅವಕಾಶ ಕೊಡುವಂತಿಲ್ಲ.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ೧೦ ರಿಂದ ೨೦ ರ ತನಕ ನಡೆಯುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಮಂಗಳವಾರ ದೇವಸ್ಥಾನದ ವಠಾರದಲ್ಲಿ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಜನ ಸಂದಣಿತ ಸಂದರ್ಭ ಮೊಬೈಲ್ ಟವರ್ ಗಳು ಕೈಕೊಟ್ಟು ಸಂಪರ್ಕ ಅಸಾಧ್ಯವಾಗುವುದರಿಂದ ಹೆಚ್ಚುವರಿಯಾಗಿ ತಾತ್ಕಾಲಿಕ ಮೊಬೈಲ್ ಟವರ್ ಅಳವಡಿಸುವ ಕಾರ್ಯ ಮಾಡಬೇಕು. ರಥೋತ್ಸವದ ಸಂದರ್ಭ ಜನರ ನೂಕು ನುಗ್ಗಲು ಆಗಬಾರದು. ಇದಕ್ಕಾಗಿ ರಥಬೀದಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜನರಿಗೆ ಪ್ರಸಾದ ಹಾಗೂ ಊಟ ತಕ್ಷಣ ನೀಡುವ ವ್ಯವಸ್ಥೆಯಾಗಬೇಕು. ಎಲ್ಲೂ ಕ್ಯೂ ನಿಲ್ಲುವ ಸ್ಥಿತಿ ನಿರ್ಮಾಣವಾಗಬಾರದು. ನಗರ ಸಭೆಯಿಂದ ದೇವಸ್ಥಾನದ ಗದ್ದೆಗೆ ನೀರು ಸಿಂಪಡಣೆ ಹಾಗೂ ರಥಬೀದಿಗೆ ಮಧ್ಯಾಹ್ನದ ಸಮಯ ನೀರು ಹಾಕಬೇಕು. ವಾಹನ ನಿಲುಗಡೆಗೆ ಹಿಂದಿನ ರೀತಿಯಲ್ಲೇ ಕೊಂಬೆಟ್ಟು, ತೆಂಕಿಲ ಶಾಲಾ ಮೈದಾನ, ಎಪಿಎಂಪಿಸಿ ಹಾಗೂ ಕಿಲ್ಲೆ ಮೈದಾನವನ್ನು ಬಳಸಿಕೊಳ್ಳಲಾಗುವುದು. ನೆಲ್ಲಿಕಟ್ಟೆ – ರೈಲ್ವೇ ನಿಲ್ದಾಣ ರಸ್ತೆಗೆ ಬೆಳಕಿನ ವ್ಯವಸ್ಥೆಯನ್ನು ಹೆಚ್ಚುವರಿಯಾಗಿ ಮಾಡಬೇಕು. ಭದ್ರತೆಯ ದೃಷ್ಠಿಯಿಂದ ಸಾಕಷ್ಟು ಸಿಸಿ ಕ್ಯಾಮರಗಳನ್ನು ಅಳವಡಿಸಲಾಗುತ್ತದೆಯಾದರೂ, ಕೆಲವು ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕಾಗಿದೆ. ತ್ಯಾಜ್ಯ ಸಂಗ್ರಹಣೆಗೆ ನಗರ ಸಭೆಯಿಂದ ವಾಹನದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ತಿಳಿಸಲಾಯಿತು.
ದೇವಸ್ಥಾನದ ಆವರಣದಲ್ಲಿ ವಿದ್ಯುತ್ ದೀಪಗಳ ಅಲಂಕಾರಕ್ಕೆ ದೇವಸ್ಥಾನದ ಮೀಟರ್ ಬೋರ್ಡ್ ನಿಂದ ಸಂಪರ್ಕ ಪಡೆಯಲಾಗುತ್ತದೆ. ಇದರಿಂದ ಓವರ್ ಲೋಡ್ ಆಗಿ ವಿದ್ಯುತ್ ಹೋದರೆ ಸರಿಪಡಿಸಲು ಸಮಸ್ಯೆಯಾಗುತ್ತದೆ. ಅಂಗಡಿಗಳಿಗೂ ವಿವಿಧ ಕಡೆಯಿಂದ ವಯರ್ ಎಳೆದು ಸಂಪರ್ಕ ಕೊಡುವುದನ್ನು ಸ್ಥಗಿತ ಮಾಡಬೇಕು. ವ್ಯವಸ್ಥಿತವಾಗಿ ವಿದ್ಯುತ್ ಪೂರೈಕೆಗೆ ಬೋರ್ಡ್ ಅಳವಡಿಕೆ ಅಥವಾ ಜನರೇಟರ್ ವ್ಯವಸ್ಥೆಯಿಂದಲೇ ಪೂರೈಸಬೇಕು. ಮುಖ್ಯ ರಸ್ತೆಯಲ್ಲಿ ದೀಪಗಳನ್ನು ಹಾಕುವವರೂ, ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮೆಸ್ಕಾಂ ಅಧಿಕಾರಿ ರಾಮಚಂದ್ರ ಹೇಳಿದರು.
ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ ಜಾತ್ರೋತ್ಸವ ಹಿನ್ನಲೆಯಲ್ಲಿ ಜನರ ಓಡಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಹೆಚ್ಚುವರಿ ಬಸ್ ಓಡಾಟಕ್ಕೆ ಕ್ರಮವನ್ನು ಕೈಗೊಳ್ಳಲಾಗಿದೆ. ಎ.೧೬ ಹಾಗೂ ೧೭ರದ್ದು ರಾತ್ರಿ ಪಾಳಿಯಲ್ಲೂ ವಿವಿಧ ಪಟ್ಟಣಗಳಿಗೆ ಬಸ್ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವವನ್ನು ವಿಜ್ರಂಭಣೆಯಿಂದ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಹಾಗೂ ಜನರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಜತೆಗೆ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡುವ ನಿಟ್ಟಿನಲ್ಲಿ ಸೂಚನೆಗಳನ್ನು ನೀಡಲಾಗಿದೆ. ಜಾತ್ರೆಯ ರಥಸೇವೆಯನ್ನು ಸುಮಾರು ೨೦೦ ಮಂದಿ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ಡ್ರೋನ್ ಗಳ ಹಾರಾಟದಿಂದ ದೇವಸ್ಥಾನದ ಆವರಣದಲ್ಲಿ ಗಿಡುಗನ ಹಾರಾಟಕ್ಕೆ ಸಮಸ್ಯೆಯಾಗುತ್ತಿದೆ. ಕೆಲವು ದೇವಸ್ಥಾನದಲ್ಲಿ ಡ್ರೋನ್ ಹಾರಾಟದಿಂದ ಸಮಸ್ಯೆಗಳಾಗಿದೆ. ಈ ನಿಟ್ಟಿನಲ್ಲಿ ಜಾತ್ರೋತ್ಸವದ ಅಂಗವಾಗಿ ಕೊಡಿ ಏರುವ ಸಂದರ್ಭ ಹಾಗೂ ರಥೋತ್ಸವದಲ್ಲಿ ಯಾವುದೇ ಡ್ರೋನ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಅಂಗಡಿಗಳನ್ನು ವ್ಯವಸ್ಥಿತವಾಗಿ ಹಾಕುವ ಮೂಲಕ ಜನರಿಗೆ ನಿಲ್ಲಲು ಹೆಚ್ಚಿನ ಸ್ಥಳಾವಕಾಶಗಳನ್ನು ನೀಡಲಾಗುವುದು ಎಂದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ ಬೇಡೆಕರ್, ಸುಭಾಷ್ ರೈ ಬೆಳ್ಳಿಪಾಡಿ, ವಿನಯ ಸುವರ್ಣ, ಕೃಷ್ಣ ವೇಣಿ, ದಿನೇಶ್ ಕುಲಾಲ್, ಮಹಾಬಲ ಶೆಟ್ಟಿ, ನಳಿನ್ ಪಿ. ಶೆಟ್ಟಿ, ತಹಸೀಲ್ದಾರ ಪುರಂದರ ಹೆಗ್ಡೆ, ಪೊಲೀಸ್ ಇಲಾಖೆಯ ಸುನಿಲ್ ಕುಮಾರ್, ಸೇಸಮ್ಮ, ಉದಯ ರವಿ, ನಗರ ಸಭೆ ಆರೋಗ್ಯ ನಿರೀಕ್ಷಕ ರಾಮಚಂದ್ರ, ತಾಲೂಕು ಆರೋಗ್ಯಾಧಿಕಾರಿ ದೀಪಕ್ ಉಪಸ್ಥಿತರಿದ್ದರು.