ಕರ್ನಾಟಕದಿಂದ ಓಡಿಹೋಗಿ ಕೈಲಾಸ ದೇಶ ಸ್ಥಾಪಿಸಿಕೊಂಡಿರುವ ನಿತ್ಯಾನಂದ
ನವದೆಹಲಿ: ಭಾರತದಿಂದ ಓಡಿಹೋಗಿ ತನ್ನದೇ ಆದ ಕೈಲಾಸ ದೇಶ ಸ್ಥಾಪಿಸಿರುವ ಬಿಡದಿಯ ನಿತ್ಯಾನಂದ ಸ್ವಾಮಿಯ ವಿರುದ್ಧ ಸುಮಾರು 3,900 ಚದರ ಕಿಲೋಮೀಟರ್ ಭೂಮಿ ಒತ್ತುವರಿ ಮಾಡಿಕೊಂಡ ಆರೋಪ ಕೇಳಿಬಂದಿದೆ. ದಕ್ಷಿಣ ಅಮೆರಿಕ ಖಂಡದಲ್ಲಿರುವ ಬೊಲಿವಿಯಾ ದೇಶದಲ್ಲಿ ನಿತ್ಯಾನಂದ ಸ್ವಾಮಿ ಮತ್ತು ಅವರ ಅನುಯಾಯಿಗಳು ಬುಡಕಟ್ಟು ಜನಾಂಗದವರ 3,900 ಚದರ ಕಿಲೋಮೀಟರ್ ಭೂ ಕಬಳಿಕೆ ಮಾಡಿದ್ದಾರೆ ಎನ್ನಲಾಗಿದೆ.
ಬೊಲಿವಿಯಾದ ಅಮೆಜಾನ್ ಪ್ರದೇಶದ ಬುಡಕಟ್ಟು ಜನಾಂಗಕ್ಕೆ ಅಸ್ತಿತ್ವದಲ್ಲಿಲ್ಲದ ಕೈಲಾಸ ದೇಶ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಅಮೆಜಾನ್ ಮಳೆಕಾಡು ಪ್ರದೇಶದ ಭೂಮಿಯನ್ನು ನಿತ್ಯಾನಂದ ಸ್ವಾಮಿ 1 ಸಾವಿರ ವರ್ಷ ಲೀಸ್‌ಗೆ ಪಡೆದು ವಂಚಿಸಿದ ಆರೋಪ ಕೇಳಿಬಂದಿದೆ.
2024ರ ಅಕ್ಟೋಬರ್-ನವೆಂಬರ್ ನಡುವೆ ಈ ಅನಧಿಕೃತ ಭೂವ್ಯವಹಾರ ನಡೆದಿದೆ. 1,08,000 ಡಾಲರ್‌ಗೆ (ವರ್ಷಕ್ಕೆ 8.96 ಲಕ್ಷ ರೂ.) ಈ ಭೂಮಿಯನ್ನು ಅಕ್ರಮವಾಗಿ ಲೀಸ್‌ಗೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಇದೀಗ ನಿತ್ಯಾನಂದನ 20ಕ್ಕೂ ಅಧಿಕ ಅನುಯಾಯಿಗಳನ್ನು ಬೊಲಿವಿಯಾದಲ್ಲಿ ಬಂಧಿಸಲಾಗಿದೆ. ಬಂಧಿತರ ಪೈಕಿ ಬಹುತೇಕ ಮಹಿಳೆಯರಿದ್ದಾರೆ. 122 ಚೀನಿಯರು, 7 ಜನ ಭಾರತೀಯರಿದ್ದಾರೆ. ಕೆಲವರನ್ನ ಬೊಲಿವಿಯಾದಿಂದ ಗಡೀಪಾರು ಮಾಡಲಾಗಿದೆ.
ಕೈಲಾಸದ ಪ್ರತಿನಿಧಿಗಳು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಲವಾರು ತಿಂಗಳುಗಳ ಕಾಲ ಬೊಲಿವಿಯಾದಲ್ಲಿ ಇದ್ದರು. ಭೂಮಿ ವಶಪಡಿಸಿಕೊಳ್ಳಲು ಸ್ಥಳೀಯ ನಾಯಕರ ಸಹಾಯವನ್ನು ಪಡೆದಿದ್ದರು. ಒಪ್ಪಂದವನ್ನು ಅಂತಿಮಗೊಳಿಸಿದ ನಂತರ ನಿತ್ಯಾನಂದ ಶಿಷ್ಯರು ಜನರಿಂದ ಒಪ್ಪಂದಕ್ಕೂ ಸಹಿ ಹಾಕಿಸಿಕೊಂಡಿದ್ದಾರೆ. ಆದರೆ ಈ ಸುದ್ದಿ ಸೋರಿಕೆಯಾಗಿ ಮಾಧ್ಯಮಗಳಲ್ಲಿ ಪ್ರಕಟವಾದ ನಂತರ ನಿತ್ಯಾನಂದ ಮತ್ತು ಅವರ ಶಿಷ್ಯರು ಸ್ಥಳೀಯ ಪತ್ರಕರ್ತರಿಗೆ ಬೆದರಿಕೆ ಹಾಕಿದರು ಎಂದು ಹೇಳಲಾಗುತ್ತಿದೆ. ಸರ್ಕಾರದ ಮೇಲೆ ಒತ್ತಡ ಹೆಚ್ಚಾದಾಗ, ಅದು ನಿತ್ಯಾನಂದನ ಈ ಸಂಪೂರ್ಣ ಒಪ್ಪಂದವನ್ನು ರದ್ದುಗೊಳಿಸಿದೆ.
ನಿತ್ಯಾನಂದ ಸ್ವಾಮಿ ಕಬಳಿಸಿರುವ ಭೂಮಿಯ ವಿಸ್ತಾರ ದೆಹಲಿಗಿಂತ 2.6 ಪಟ್ಟು, ಮುಂಂಬಯಿಗಿಂತ 6.5 ಪಟ್ಟು, ಬೆಂಗಳೂರಿಗಿಂತ 5.3 ಪಟ್ಟು, ಕೋಲ್ಕತ್ತಾಕ್ಕಿಂತ 19 ಪಟ್ಟು ದೊಡ್ಡದಾಗಿದೆ.
ನಿತ್ಯಾನಂದನ ತಂಡ ಭೂಕಬಳಿಕೆ ಆರೋಪವನ್ನು ನಿರಾಕರಿಸಿದೆ. ತಪ್ಪು ವರದಿಯಿಂದ ಹಿಂದು ಸನ್ಯಾಸಿಗಳನ್ನ ಬಂಧಿಸಿ ಹಲ್ಲೆ ಮಾಡಲಾಗಿದೆ ಎಂದು ಹೇಳಿದೆ.
ಕರ್ನಾಟಕದ ಬಿಡದಿಯಲ್ಲಿ ಆಶ್ರಮ ಹೊಂದಿದ್ದ ನಿತ್ಯಾನಂದ ಸ್ವಾಮಿ 2019ರಲ್ಲಿ ಭಾರತದಿಂದ ಪರಾರಿಯಾಗಿದ್ದು, ಅವರ ವಿರುದ್ಧ ಹಲವು ಗಂಭೀರ ಆರೋಪಗಳಿವೆ. ಕೈಲಾಸ ಎಂಬ ಸ್ವಂತ ರಾಷ್ಟ್ರವನ್ನು ಸ್ಥಾಪಿಸಿದ್ದಾನೆ ಎಂದು ವರದಿಯಾಗಿತ್ತು. ಅದರಲ್ಲಿ ತನ್ನದೇ ಆದ ಕರೆನ್ಸಿ ಮತ್ತು ಸಂವಿಧಾನವನ್ನು ಹೊಂದಿದ್ದಾನೆ ಎಂದು ಹೇಳಲಾಗಿತ್ತು. 2010ರಲ್ಲಿ ನಟಿಯ ಜೊತೆಗಿರುವ ನಿತ್ಯಾನಂದನ ಅಶ್ಲೀಲ ಸಿಡಿ ಹೊರಬಂದಿತ್ತು. 2012ರಲ್ಲಿ ನಿತ್ಯಾನಂದನ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ ಇಬ್ಬರು ಹುಡುಗಿಯರನ್ನು ಅಪಹರಿಸಿ ಬಂಧಿಯಾಗಿರಿಸಿದ್ದಕ್ಕಾಗಿ ನಿತ್ಯಾನಂದನ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೆಲ ಸಮಯ ಜೈಲಿನಲ್ಲೂ ಇದ್ದ ನಿತ್ಯಾನಂದ ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ದೇಶಬಿಟ್ಟು ಹೋಗಿದ್ದಾನೆ.