ಮೂರು ತಿಂಗಳ ಬಳಿಕ ಬೆಳಕಿಗೆ ಬಂದ ಆಘಾತಕಾರಿ ಕೊಲೆ ಪ್ರಕರಣ
ಚಂಡೀಗಢ : ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಯೋಗ ಶಿಕ್ಷಕನನ್ನು ವ್ಯಕ್ತಿಯೊಬ್ಬ 7 ಅಡಿ ಗುಂಡಿ ಅಗೆದು ಜೀವಂತ ಹೂತು ಹಾಕಿದ ಘಟನೆಯೊಂದು ಹರ್ಯಾಣದ ಚರ್ಖಿ ದಾದ್ರಿ ಎಂಬಲ್ಲಿ ಮೂರು ತಿಂಗಳ ಬೆಳಕಿಗೆ ಬಂದಿದೆ. ರೋಹ್ಟಕ್‌ನ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ಯೋಗ ಉಪನ್ಯಾಸಕನಾಗಿದ್ದ ಜಗದೀಪ್ ಕೊಲೆಯಾದ ವ್ಯಕ್ತಿ. ಮಾ.24ರಂದು ಪೊಲೀಸರು ಅವನ ಶವವನ್ನು ಮೇಲೆತ್ತಿ ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.
ಕಳೆದ ಡಿ.24ರಂದು ಜಗದೀಪ್ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಆರೋಪಿ ಹರದೀಪ್ ತನ್ನ ಸ್ನೇಹಿತನೊಬ್ಬನ ಸಹಾಯದಿಂದ ಅವನನ್ನು ಅಪಹರಿಸಿದ್ದ. ಕೈಕಾಲುಗಳನ್ನು ಕಟ್ಟಿಹಾಕಿ, ಬಾಯಿಗೆ ಟೇಪ್ ಹಾಕಿ ಕಾರಿನಲ್ಲಿ ಊರಿನಿಂದ ದೂರವಿರುವ ನಿರ್ಜನ ಹೊಲಕ್ಕೆ ಕರೆದುಕೊಂಡು ಹೋಗಿ 7 ಟಡಿಯಷ್ಟು ಆಳದ ಗುಂಡಿ ಅಗೆದು ಹೂತು ಹಾಕಿದ್ದರು. ಗುಂಡಿ ತೋಡಲು ಬಂದ ಕೂಲಿ ಕಾರ್ಮಿಕನಿಗೆ ಬೋರ್‌ವೆಲ್ ಹಾಕಿಸಲು ಗುಂಡಿ ತೋಡಬೇಕು ಎಂದು ಹೇಳಿದ್ದರು. ಜಗದೀಪ್ ಜೀವಂತವಾಗಿರುವಾಗಲೇ ಈ ಗುಂಡಿಗೆ ಹಾಕಿ ಮಣ್ಣುಮುಚ್ಚಿ ಹೋಗಿದ್ದರು. ಹರ್‌ದೀಪ್ ವಾಸವಿರುವ ವಸತಿ ಕಟ್ಟಡದ ಕೋಣೆಯೊಂದರಲ್ಲಿ ಜಗದೀಪ್ ಬಾಡಿಗೆಗಿದ್ದ. ಆಗ ಹರ್‌ದೀಪ್‌ನ ಹೆಂಡತಿ ಅವನ ಬಳಿ ಯೋಗ ಕಲಿಯಲು ಹೋಗುತ್ತಿದ್ದಳು. ಈ ಸಂದರ್ಭ ಅನೈತಿಕ ಸಂಬಂಧ ಬೆಳೆದಿದೆ ಎನ್ನಲಾಗಿದೆ.
ಜಗದೀಪ್ ನಾಪತ್ತೆಯಾದ ಹತ್ತು ದಿನಗಳ ಬಳಿಕ ಆತನ ಸಂಬಂಧಿಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಮೂರು ತಿಂಗಳಾದರೂ ಪೊಲೀಸರಿಗೆ ಅವನ ಸುಳಿವು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ಕೆಲವು ತಿಂಗಳ ಹಿಂದಿನ ಕಾಲ್ ರೆಕಾರ್ಡ್‌ಗಳ ತನಿಖೆ ಮಾಡಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ಹರದೀಪ್ ಮತ್ತು ಅವನ ಸ್ನೇಹಿತ ಧರ್ಮಪಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.