ಇನ್ನೊಂದು ಶವಪತ್ತೆ; ಮೃತರ ಸಂಖ್ಯೆ 2ಕ್ಕೇರಿಕೆ, ಒಳಗೆ ಸಿಲುಕಿದ್ದಾರೆ ಇನ್ನೂ ಆರು ಕಾರ್ಮಿಕರು
ಹೈದರಾಬಾದ್ : ತೆಲಂಗಾಣದ ನಾಗಕರ್ನೂಲ್ ಜಿಲ್ಲೆಯಲ್ಲಿ ಸಂಭವಿಸಿದ ಸುರಂಗ ಕುಸಿತದ ರಕ್ಷಣಾ ಕಾರ್ಯಾಚರಣೆ ಒಂದು ತಿಂಗಳಾದರೂ ಮುಗಿದಿಲ್ಲ. ನಿನ್ನೆ ಸುರಂಗದೊಳಗೆ ಇನ್ನೋರ್ವ ಕಾರ್ಮಿಕನ ಶವ ಪತ್ತೆಯಾಗಿದ್ದು, ಇದರೊಂದಿಗೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕೃತವಾಗಿ ಎರಡಕ್ಕೇರಿದೆ. ಇನ್ನೂ ಆರು ಮಂದಿ ಸುರಂಗದೊಳಗಿದ್ದು, ಅವರ ಸ್ಥಿತಿ ಏನಾಗಿದೆ ಎಂದು ಗೊತ್ತಾಗಿಲ್ಲ. ಮಾ.9ರಂದು ಗುರುಪ್ರೀತ್ ಸಿಂಗ್ ಎಂಬ ಕಾರ್ಮಿಕನ ಶವ ಪತ್ತೆಯಾಗಿತ್ತು. ನಿನ್ನೆ ಪತ್ತೆಯಾದ ಶವದ ಗುರುತು ಪತ್ತೆಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಕಳೆದ ಫೆ.22ರಂದು ಶ್ರೀಶೈಲಂನಲ್ಲಿ ನೀರಾವರಿ ಕಾಲುವೆಯ ಸುರಂಗ ಕಾಮಗಾರಿ ನಡೆಯುತ್ತಿದ್ದ ವೇಳೆ ಕುಸಿತ ಸಂಭವಿಸಿದೆ. ಅಂದಿನಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೂ ಇನ್ನೂ ಕುಸಿತ ಸಂಭವಿಸಿದ ಸ್ಥಳಕ್ಕೆ ತಲುಪಲು ಸಾಧ್ಯವಾಗಿಲ್ಲ. 32 ದಿನಗಳಿಂದಲೂ ಇಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಎಸ್‌ಸಿಸಿಎಲ್, ಅನ್ವಿ ರೋಬೋಟಿಕ್ಸ್ ಮುಂತಾದ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ. ರಕ್ಷಣಾ ಕಾರ್ಯಾಚರಣೆಗೆ ರೋಬೋಟ್‌ಗಳನ್ನು ಬಳಸಿದರೂ ಯಾವುದೇ ಪ್ರಗತಿ ಸಾಧಿಸದಿರುವುದು ಮತ್ತು ರಕ್ಷಣಾ ಕಾರ್ಯಾಚರಣೆ ಇಷ್ಟು ವಿಳಂಬವಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತೆಲಂಗಾಣದ ಕಾಂಗ್ರೆಸ್ ಸರಕಾರದ ವೈಫಲ್ಯದ ವಿರುದ್ಧ ವಿಪಕ್ಷಗಳು ಪ್ರತಿಭಟನೆ ನಡೆಸಿವೆ.
ಈ ನಡುವೆ ಶ್ರೀಶೈಲಂ ಎಡದಂಡೆ ಕಾಲುವೆ ಸುರಂಗದೊಳಗೆ ಸಿಲುಕಿರುವ ಎಂಟು ಕಾರ್ಮಿಕರನ್ನು ಹೊರತೆಗೆಯುವ ಪ್ರಯತ್ನಗಳನ್ನು ತ್ವರಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು. ಈ ವಿಷಯದಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಅಡ್ವೊಕೇಟ್ ಜನರಲ್ ಎ. ಸುದರ್ಶನ್ ರೆಡ್ಡಿ ಅವರ ವಿವರಣೆಯನ್ನು ಪರಿಗಣಿಸಿದ ನಂತರ, ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಲಾಗಿದೆ.

ಏನಿದು ಅವಘಡ?
ಶ್ರೀಶೈಲಂ ಎಡದಂಡೆ ಕಾಲುವೆ ಎನ್ನುವುದು ತೆಲಂಗಾಣದ ಮಹತ್ವದ ನೀರಾವರಿ ಯೋಜನೆ. ಶ್ರೀಶೈಲಂ ಅಣೆಕಟ್ಟಿನಿಂದ ರೈತರ ಹೊಲಗಳಿಗೆ ನೀರು ಹರಿಸುವ ಸಲುವಾಗಿ ಭೂಗತ ಎಡದಂಡೆ ಕಾಲುವೆ ನಿರ್ಮಾಣಕ್ಕಾಗಿ ತೋಡುತ್ತಿರುವ ಸುರಂಗ ಇದು. ಫೆ.22ರಂದು ಕಾಮಗಾರಿ ನಡೆಯುತ್ತಿರುವಾಗಲೇ ಸುರಂಗ ಕುಸಿದುಬಿದ್ದಿದೆ. ಸುರಂಗದೊಳಗೆ ಸುಮಾರು 14 ಕಿ.ಮೀ. ದೂರದಲ್ಲಿ ಕುಸಿತ ಸಂಭವಿಸಿದ್ದು, ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸ್ಥಳ ರಕ್ಷಣಾ ಪಡೆಗಳಿಗೆ ನಿಖರವಾಗಿ ತಿಳಿದಿಲ್ಲ. 5 ಮೀಟರ್ ಮಣ್ಣಿನ ದಪ್ಪ ಪದರವನ್ನು ನಿವಾರಿಸಿಕೊಂಡು ಹೋಗಿ ಕಾರ್ಮಿಕರನ್ನು ಪತ್ತೆಹಚ್ಚಬೇಕಾಗಿದೆ.
ಆಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ವೇಳೆ 56 ಕಾರ್ಮಿಕರು ಒಳಗೆ ಸಿಲುಕಿದ್ದರು. ಈ ಪೈಕಿ 48 ಜನರನ್ನು ಆರಂಭದಲ್ಲಿಯೇ ರಕ್ಷಿಸಲಾಗಿದ್ದು, 8 ಕಾರ್ಮಿಕರು ಸಿಲುಕಿಕೊಂಡಿದ್ದರು.
ಸಿಲ್ಕಯಾರ ಕುಸಿತದ ಜೊತೆ ಹೋಲಿಕೆ
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕಯಾರ ಬಳಿ ಕಳೆದ ವರ್ಷ ನ.12ರಂದು ಸಂಭವಿಸಿದ ಸುರಂಗ ಮಾರ್ಗ ಕುಸಿತ ದುರಂತದ ಜೊತೆಗೆ ತೆಲಂಗಾಣದ ದುರಂತವನ್ನು ಹೋಲಿಸಲಾಗುತ್ತದೆ. ಸಿಲ್ಕಾಯಾರದಲ್ಲಿ ಹೆದ್ದಾರಿಗಾಗಿ ಸುರಂಗ ತೋಡುತ್ತಿದ್ದಾಗ ಇದೇ ಮಾದರಿ ಕುಸಿತ ಉಂಟಾಗಿ 41 ಕಾರ್ಮಿಕರು ಒಳಗೆ ಸಿಲುಕಿದ್ದರು. ಅವರನ್ನು 17 ದಿನಗಳ ಕಾರ್ಯಾಚರಣೆ ಬಳಿಕ ಜೀವಂತವಾಗಿ ರಕ್ಷಿಸಲಾಗಿತ್ತು. ಈ ರಕ್ಷಣಾ ಕಾರ್ಯಾಚರಣೆಗಾಗಿ ಕೇಂದ್ರ ಸರಕಾರ ಅತ್ಯಾಧುನಿಕ ಯಂತ್ರಗಳು, ತಂತ್ರಜ್ಞಾನವನ್ನು ಬಳಸಿದ್ದಲ್ಲದೆ ಇಂಥ ಕಾರ್ಯಾಚರಣೆಯಲ್ಲಿ ನಿಪುಣರಾಗಿರುವ ವಿದೇಶಗಳ ತಂತ್ರಜ್ಞರನ್ನೂ ಕರೆಸಿತ್ತು. ಈ ಸಾಹಸಮಯ ಕಾರ್ಯಾಚರಣೆ ಇಡೀ ಜಗತ್ತಿನಲ್ಲಿ ಸುದ್ದಿಯಾಗಿತ್ತು. ಉತ್ತರಖಂಡದ ಸಿಲುಕಿದ ಕಾರ್ಮಿಕರ ಜೀವಕ್ಕಿರುವ ಬೆಲೆ ತೆಲಂಗಾಣದ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ಜೀವಕ್ಕೆ ಇಲ್ಲವೇ ಎಂಬ ಆಕ್ರೋಶ ವ್ಯಕ್ತವಾಗಿದೆ.