ವೈರಲ್ ಆಯಿತು ಕೊಳಕು ಬೈಗುಳದ ಸ್ಕ್ರೀನ್‌ಶಾಟ್
ಬೆಂಗಳೂರು : ರಾಜ್ಯದ ಕಾಂಗ್ರೆಸ್ ಸಚಿವರಿಗೆ ದಿನಕ್ಕೊಂದರಂತೆ ವಿವಾದಗಳು ಸುತ್ತಿಕೊಳ್ಳುತ್ತಿವೆ. ಇದೀಗ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸರದಿ. ಫೇಸ್‌ಬುಕ್‌ನಲ್ಲಿ ತನ್ನ ಪೋಸ್ಟ್ಗೆ ಕಮೆಂಟ್ ಮಾಡಿದ್ದ ವ್ಯಕ್ತಿಗೆ ಭೈರತಿ ಸುರೇಶ್ ತೀರಾ ಕೊಳಕು ಭಾಷೆಯಲ್ಲಿ ನಿಂದಿಸಿರುವ ಕೆಲವು ಸ್ಕ್ರೀನ್‌ಶಾಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ. ಸಚಿವರು ಬಳಸಿದ ಭಾಷೆಯ ಬಗ್ಗೆ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಕೆಲವರು ಇದು ಕಾಂಗ್ರೆಸ್ ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮೆಂಟ್ ಮಾಡಿದ ವ್ಯಕ್ತಿಯನ್ನುದ್ದೇಶಿಸಿ ಬೈರತಿ ಸುರೇಶ್ ಅವಾಚ್ಯವಾಗಿ ನಿಂದಿಸಿರುವ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ನೀರು ಉಚಿತ ಪೂರೈಸುವ ಟ್ಯಾಂಕರ್ಗಳಿಗೆ ಚಾಲನೆ ನೀಡಿರುವ ಬಗ್ಗೆ ಸಚಿವ ಬೈರತಿ ಸುರೇಶ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ಗೆ ಕಾರ್ತಿಕ್ ಎಂಬ ವ್ಯಕ್ತಿ ಇದೆಲ್ಲ ನಾಟಕ, ಜನ ಮೂರ್ಖರೆಂದು ಕಮೆಂಟ್ ಮಾಡಿದ್ದರು. ಕಾರ್ತಿಕ್ ಅವರ ಈ ಕಮೆಂಟ್‌ಗೆ ಭೈರತಿ ಸುರೇಶ್, ನಿನ್ನ ಅಡ್ರೆಸ್ ಕೊಡು ಹೊಡೆದು ಹಾಕ್ತೀನಿ. ನಿನ್ನ ಅಪ್ಪನಿಗೆ ಹುಟ್ಟಿದ್ರೆ ಅಡ್ರೆಸ್ ಹಾಕು, ಸೂ… ಎಂದೆಲ್ಲ ಕಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.
ಫೇಸ್‌ಬುಕ್ ಕಮೆಂಟ್ಗಳನ್ನು ಯಾರೋ ಸ್ಕ್ರೀನ್‌ಶಾಟ್ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದು, ಇದು ವೈರಲ್ ಆಗಿದೆ. ಫೋಟೊಗಳು ವೈರಲ್ ಆಗುತ್ತಿದ್ದಂತೆ ಫೇಸ್‌ಬುಕ್‌ನಿಂದ ಕಮೆಂಟ್ಗಳನ್ನು ಡಿಲೀಟ್ ಮಾಡಲಾಗಿದೆ. ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ. ಈ ರೀತಿಯ ಮೆಸೇಜ್‌ಗಳಿಗೆ ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಬೈರತಿ ಸುರೇಶ್ ಸ್ಪಷ್ಟನೆ ನೀಡಿದ್ದಾರೆ.