ಪ್ರೋಟೊಕಾಲ್ ದುರ್ಬಳಕೆ ಮಾಡಿ ಚಿನ್ನ ಕಳ್ಳ ಸಾಗಾಟ ಮಾಡಿದ ಕುರಿತು ತನಿಖೆ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 14.2 ಕೆಜಿ ಚಿನ್ನದೊಂದಿಗೆ ಡಿಆರ್ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ಗೆ ನೀಡಿದ ಪ್ರೋಟೊಕಾಲ್ ಕುರಿತಾದ ತನಿಖಾ ವರದಿ ಇಂದು ಸರಕಾರದ ಕೈಸೇರಲಿದೆ. ಸರಕಾರ ಈ ಪ್ರಕರಣದಲ್ಲಿ ಪ್ರೋಟೋಕಾಲ್ ದುರ್ಬಳಕೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ ಅವರಿಗೆ ಆದೇಶಿಸಿತ್ತು. ಈಗ ವರದಿ ಸಿದ್ದವಾಗಿದ್ದು ಇಂದು ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ತನಿಖಾ ವರದಿ ಸಿದ್ಧವಾಗಿದೆ. ಇದುವರೆಗೆ ಹಲವರ ವಿಚಾರಣೆ ಮಾಡಿದ್ದೇವೆ. ಕೊನೆ ಹಂತದ ಮಾಹಿತಿ ಸಂಗ್ರಹ ಆಗಿದೆ. ಸರಕಾರಕ್ಕೆ ಇಂದೇ ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಇದುವರೆಗೆ, 10-15 ಜನರ ವಿಚಾರಣೆ ಮಾಡಿದ್ದೇವೆ, ಸರ್ಕಾರಕ್ಕೆ ವರದಿ ಕೊಡುತ್ತೇವೆ. ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿಚಾರಣೆ ಮಾಡಿದ್ದೇವೆ. ಆದರೆ ಈಗ ತನಿಖಾ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಆಗದು ಎಂದು ಗೌರವ್ ಗುಪ್ತ ಹೇಳಿದ್ದಾರೆ.
ರನ್ಯಾ ರಾವ್ ಒಂದು ವರ್ಷದ ಅವಧಿಯಲ್ಲಿ 27 ಬಾರಿ ವಿದೇಶಕ್ಕೆ ಹೋಗಿಬಂದಿದ್ದಾಳೆ. ಈ ಪ್ರಯಾಣದ ಸಂದರ್ಭದಲ್ಲಿ ಆಕೆಗೆ ಸರಕಾರದ ಪ್ರೋಟೊಕಾಲ್ ನೀಡಲಾಗಿತ್ತು. ಹಿರಿಯ ಐಪಿಎಸ್ ಅಧಿಕಾರಿಯ ಮಗಳು ಎಂಬ ನೆಲೆಯಲ್ಲಿ ಪ್ರೋಟೊಕಾಲ್ ರಕ್ಷಣೆ ಪಡೆದು ಚಿನ್ನ ಕಳ್ಳಸಾಗಾಟ ಮಾಡುತ್ತಿದ್ದಳು. ಈ ವಿಚಾರ ಅಧಿವೇಶನದಲ್ಲೂ ಕೋಲಾಹಲ ಎಬ್ಬಿಸಿದ್ದು, ಶಾಸಕ ಸುನಿಲ್ ಕುಮಾರ್ ಸೇರಿದಂತೆ ವಿಪಕ್ಷ ಶಾಸಕರು ಸರಕಾರವನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದರು. ರನ್ಯಾ ರಾವ್‌ಗೆ ಪ್ರತಿ ಪ್ರಯಾಣದ ಸಂದರ್ಭದಲ್ಲೂ ಒಬ್ಬನೇ ಪೊಲೀಸ್ ಕಾನ್‌ಸ್ಟೆಬಲ್ ಪ್ರೋಟೊಕಾಲ್ ನೀಡಲು ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯನ್ನು ಸುನಿಲ್ ಕುಮಾರ್ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಲ್ಲಿಕೆಯಾಗಲಿರುವ ವರದಿ ಕುತೂಹಲ ಕೆರಳಿಸಿದೆ. ಮತ್ತೊಂದೆಡೆ, 64ನೇ ಸಿಸಿಎಚ್ ನ್ಯಾಯಾಲಯದಲ್ಲಿ ರನ್ಯಾ ರಾವ್ ಜಾಮೀನು ಅರ್ಜಿ ವಿಚಾರಣೆ ಸೋಮವಾರ ನಡೆದಿದೆ. ರನ್ಯಾ ರಾವ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಿರಣ್ ಜವಳಿ, ಆಕೆಯ ಪಾಸ್‌ಪೋರ್ಟ್ ಡಿಆರ್ಐ ವಶದಲ್ಲಿ ಇದೆ. ಹೀಗಿರುವಾಗ ಆಕೆ ಹೇಗೆ ದೇಶ ಬಿಟ್ಟು ಹೋಗಲು ಸಾಧ್ಯವಿಲ್ಲ, ಹೀಗಾಗಿ ಜಾಮೀನು ಮಂಜೂರು ಮಾಡಬೇಕೆಂದು ವಾದಿಸಿದ್ದಾರೆ.