ಕೆಲವೇ ಸೆಕೆಂಡುಗಳಲ್ಲಿ ಹರಡಿ ಬೆಕ್ಕುಗಳನ್ನು ಸಾಯಿಸುವ ವೈರಾಣು
ಬೆಂಗಳೂರು: ಹಕ್ಕಿಜ್ವರದ ಹಾವಳಿಯ ಬೆನ್ನಿಗೆ ಈಗ ರಾಜ್ಯದ ಕೆಲವೆಡೆಗಳಲ್ಲಿ ಬೆಕ್ಕುಗಳಿಗೆ ವೈರಸ್ ಸೋಂಕು ತಗಲಿದ್ದು, ಬೆಕ್ಕುಗಳು ಹಠಾತ್ ಸಾವಿಗೀಡಾಗುತ್ತಿವೆ. ಬೆಕ್ಕುಗಳಿಗೆ ಬಂದಿರುವ ಮರಣಾಂತಿಕ ರೋಗಕ್ಕೆ ಎಫ್ಪಿವಿ ವೈರಸ್ ಕಾರಣ ಎಂದು ಗುರುತಿಸಲಾಗಿದೆ. ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಈ ವೈರಸ್ ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ. ಅಲ್ಲದೆ ರಾಜ್ಯದ ವಿವಿಧೆಡೆ ವೈರಸ್ ಸೋಂಕು ಹರಡುತ್ತಿದೆ. ರಾಯಚೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳಲ್ಲಿ ವೈರಸ್ ಪತ್ತೆಯಾಗಿದೆ. ವೈರಸ್ ಸೋಂಕು ತಗುಲಿದಲ್ಲಿ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಸೋಂಕು ತಗುಲಿದ 100 ಬೆಕ್ಕುಗಳಲ್ಲಿ 99 ಸಾವನ್ನಪ್ಪುವ ಸಾಧ್ಯತೆ ಇದೆ. ಒಂದು ಬೆಕ್ಕಿಗೆ ವೈರಸ್ ಸೋಂಕು ತಗಲಿದರೆ ಕೆಲವೇ ಸೆಕೆಂಡುಗಳಲ್ಲಿ ಹತ್ತಿರವಿರುವ ಎಲ್ಲ ಬೆಕ್ಕುಗಳಿಗೆ ಹರಡುತ್ತದೆ. ಇದರಿಂದಾಗಿ ಬೆಕ್ಕು ಸಾಕುವವರಿಗೆ ಆತಂಕ ಉಂಟಾಗಿದೆ. ಕೊರೊನಾ ವೈರಸ್ ರೀತಿ ಎಫ್ಪಿವಿ ವೈರಾಣು ಸೋಂಕಿಗೂ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ರಾಯಚೂರಿನಲ್ಲಿ ಸದ್ಯ 150ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 100ಕ್ಕೂ ಹೆಚ್ಚು ಬೆಕ್ಕುಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿವೆ. ಬೀದಿ ಬೆಕ್ಕುಗಳು, ಸಾಕು ಬೆಕ್ಕುಗಳಲ್ಲಿ ವೈರಸ್ ಪತ್ತೆಯಾಗಿದೆ.
ಎಫ್ಪಿವಿ ವೈರಸ್ ತಗುಲಿದರೆ ಮೂರು ಹಂತದಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮೊದಲ ಹಂತದಲ್ಲಿ ವಾಂತಿ, ಭೇದಿ, ನಿರ್ಜಲೀಕರಣ ಉಂಟಾಗುತ್ತದೆ. ಎರಡನೆ ಹಂತದಲ್ಲಿ ಹೆಚ್ಚಿನ ತಾಪದೊಂದಿಗೆ ಜ್ವರ ಕಾಣಿಸಿಕೊಳ್ಳುತ್ತದೆ. ಮೂರನೇ ಹಂತದಲ್ಲಿ ನಿಶ್ಯಕ್ತಿ, ಖಿನ್ನತೆ ಉಂಟಾಗಿ ಸಾಯುತ್ತವೆ.