ಹಾಗೇ ಹೇಳಿಯೇ ಇಲ್ಲ ಎಂದು ಪಾರಾಗಲು ಯತ್ನ
ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣದಲ್ಲಿ ಅನುಮಾನದ ನೋಟಗಳಿಗೆ ಗುರಿಯಾಗಿ ಮುಜುಗರ ಅನುಭವಿಸುತ್ತಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದರ ಬೆನ್ನಿಗೆ ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ನೀಡಿ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ತೀವ್ರ ವಿವಾದದ ಸುಳಿಯಲ್ಲಿ ಸಿಲುಕಿರುವ ಡಿ.ಕೆ.ಶಿವಕುಮಾರ್ ತಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿ ಪಾರಾಗಲು ಯತ್ನಿಸಿದ್ದಾರೆ. ಸಂದರ್ಶನದಲ್ಲಿ ಶಿವಕುಮಾರ್ ನೀಡಿದ ಹೇಳಿಕೆ ಕಳೆದ ಲೋಕಸಭೆ ಚುನಾವಣೆಯಿಂದೀಚೆಗೆ ಸಂವಿಧಾನ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ತೀವ್ರ ಮುಜುಗರ ಉಂಟುಮಾಡಿದೆ.
ನಿನ್ನೆ ಲೋಕಸಭೆಯ ಅಧಿವೇಶನದಲ್ಲಿ ಬಿಜೆಪಿ ನಾಯಕರು ಶಿವಕುಮಾರ್ ಹೇಳಿಕೆಯನ್ನು ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟಿದ್ದಾರೆ. ಹೀಗೆ ತನ್ನ ಹೇಳಿಕೆ ರಾಷ್ಟ್ರೀಯ ವಿವಾದವಾದ ಬಳಿಕ ಶಿವಕುಮಾರ್ ತಾನು ಹಾಗೆ ಹೇಳಿಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸಂವಿಧಾನ ಬದಲು ಮಾಡುವುದಾಗಿ ನಾನು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿ ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ರಾಜ್ಯಸಭೆಯಲ್ಲಿ ತಮ್ಮ ಹೇಳಿಕೆ ಪ್ರಸ್ತಾಪವಾದ ಬೆನ್ನಲ್ಲೇ ಮಾಧ್ಯಮಗಳ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದರು.
ನಾನು ಹಾಗೆ ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನು ಬಿಜೆಪಿ ತಿರುಚಿದೆ. ಕಳೆದ 36 ವರ್ಷಗಳಿಂದ ಶಾಸಕನಾಗಿ ವಿಧಾನಸಭೆಯಲ್ಲಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ. ಇಂತಹ ವಿಚಾರದಲ್ಲಿ ಜೆ.ಪಿ ನಡ್ಡಾ ಅವರಿಗಿಂತಲೂ ನಾನು ಉತ್ತಮ ಸೂಕ್ಷ್ಮತೆ ಇರುವ ರಾಜಕಾರಣಿ ನಾನು. ಆದರೆ, ಬಿಜೆಪಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಸುಳ್ಳು ಹೇಳಿಕೆ ಸೃಷ್ಟಿಸಿ, ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ನಾನು ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿಲ್ಲ ಎಂದು ಹೇಳಿದರು. ನ್ಯಾಯಾಲಯಗಳ ತೀರ್ಪಿನ ಅನುಸಾರ ತಿದ್ದುಪಡಿ ತಂದಿರುವ ನಿದರ್ಶನವಿದೆ ಎಂದು ಹೇಳಿದ್ದೇನೆಯೇ ಹೊರತು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿರುವ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆಂದು ತಿಳಿಸಿದರು.