ಚಿತ್ರ ವೀಕ್ಷಿಸಲಿರುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ
ನವದೆಹಲಿ: ಈಗಾಗಲೇ ಜಾಗತಿಕವಾಗಿ ಭರ್ಜರಿ ಯಶಸ್ಸು ಕಂಡಿರುವ ಹಾಗೂ ಒಂದು ವರ್ಗದ ಆಕ್ರೋಶಕ್ಕೂ ಗುರಿಯಾಗಿರುವ ಹಿಂದಿಯ ಛಾವಾ ಸಿನಿಮಾ ಮಾ.27ರಂದು ಸಂಸತ್ತಿನಲ್ಲಿ ಪ್ರದರ್ಶನಗೊಳ್ಳಲಿದೆ. ಸಂಸತ್ತಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ವಿಕ್ಕಿ ಕೌಶಲ್ ನಟನೆಯ ಛಾವಾ ಸಿನಿಮಾ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಜೀವನಾಧಾರಿತ ಛಾವಾ ಸಿನಿಮಾವನ್ನು ಸಂಸತ್ತಿನ ಗ್ರಂಥಾಲಯ ಕಟ್ಟಡದಲ್ಲಿರುವ ಬಾಲಯೋಗಿ ಸಭಾಂಗಣದಲ್ಲಿ ಪ್ರದರ್ಶಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಛಾವಾ ಸಿನಿಮಾದ ವಿಶೇಷ ಪ್ರದರ್ಶನದಲ್ಲಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಎಲ್ಲಾ ಕೇಂದ್ರ ಸಚಿವರು ಭಾಗಿಯಾಗುವ ನಿರೀಕ್ಷೆಯಿದೆ. ಜೊತೆಗೆ ಛಾವಾ ಸಿನಿಮಾದಲ್ಲಿ ಸಂಭಾಜಿ ಮಹಾರಾಜರ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಕ್ಕಿ ಕೌಶಲ್ ಹಾಗೂ ಇಡೀ ಸಿನಿಮಾ ತಂಡ ಹಾಜರಾಗುವ ನಿರೀಕ್ಷೆಯಿದೆ. ಕಳೆದ ಫೆ.14ರಂದು ಲಕ್ಷ್ಮಣ್ ಉಟೇಕರ್ ನಿರ್ದೇಶನದ ಛಾವಾ ಸಿನಿಮಾ ದೇಶ್ಯಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಅವರ ಧೈರ್ಯ ಮತ್ತು ಔರಂಗಜೇಬನಿಂದಾಗಿ ಅನುಭವಿಸಿದ ಹಿಂಸೆಯನ್ನು ವಿವರಿಸುತ್ತದೆ.
ದೇಶ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಈ ಸಿನಿಮಾ ಕುರಿತು ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಅಖಿಲ ಭಾರತೀಯ ಮರಾಠಿ ಸಾಹಿತ್ಯ ಸಮ್ಮೇಳನದ ಭಾಷಣದಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾಗಪುರದ ಮಹಲ್‌ನಲ್ಲಿ ಕೆಲದಿನಗಳ ಹಿಂದೆ ನಡೆದ ಹಿಂದು-ಮುಸ್ಲಿಂ ಹಿಂಸಾಚಾರಕ್ಕೂ ಜನರು ಛಾವಾ ಸಿನಿಮಾ ನೋಡಿ ನೈಜ ಇತಿಹಾಸ ತಿಳಿದುಕೊಂಡು ಆಕ್ರೋಶಗೊಂಡಿರುವುದು ಕಾರಣ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಹೇಳಿದ್ದರು. ಮೊಗಲ ದೊರೆ ಔರಂಗಜೇಬನ ಬಂಧನದಲ್ಲಿ ಸಂಭಾಜಿ ಮಾಹಾರಾಜರು ಚಿತ್ರಹಿಂಸೆ ಅನುಭವಿಸಿ ಸಾಯುವ ಐತಿಹಾಸಿಕ ಘಟನೆಯನ್ನು ಚಿತ್ರದಲ್ಲಿ ನೈಜವಾಗಿ ತೋರಿಸಿದೆ. ಇದು ಮರಾಠ ಜನರ ಭಾವನೆಯನ್ನು ಕೆರಳಿಸಿದೆ ಎನ್ನಲಾಗಿದೆ.