ಪುತ್ತೂರು: ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಜನಸಾಮಾನ್ಯರು ಕ್ಲಿಷ್ಟಕರ ಜೀವನ ನಡೆಸುತ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಜನರ ಹಾದಿ ತಪ್ಪಿಸುತ್ತಿದ್ದಾರೆ. ಇದೀಗ ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನವನ್ನು ಮುಸಲ್ಮಾನರ ಓಲೈಕೆಗಾಗಿ ಬದಲಾವಣೆ ಮಾಡಲು ಹೊರಟು ಸಂವಿಧಾನಕ್ಕೆ ಅವಮಾನ ಮಾಡುವ ನೀಚ ರಾಜಕೀಯಕ್ಕಿಳಿದಿದ್ದಾರೆ ಡಿ.ಕೆ.ಶಿವಕುಮಾರ್ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದರು.
ಅವರು ಮಂಗಳವಾರ ಸಂಜೆ ದರ್ವೆ ವೃತ್ತದ ಬಳಿಕ ಪುತ್ತೂರು ಬಿಜೆಪಿ ವತಿಯಿಂದ ಮುಸಲ್ಮಾನರಿಗಾಗಿ ಸಂವಿಧಾನ ಬದಲಾಯಿಸಲು ಹೊರಟ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅಲ್ಪಸಂಖ್ಯಾತರ ಓಲೈಕೆ ಮೂಲಕ ಓಟ್ ಬ್ಯಾಂಕ್ ಗಳನ್ನಾಗಿ ಮಾಡಲು ಹೊರಟ ಕಾಂಗ್ರೆಸ್ ನವರು ಕುಕ್ಕರ್ ಬಾಂಕ್ ಬ್ಲಾಸ್ಟರನ್ನು ಸಹೋದರ ಎನ್ನುತ್ತಿದೆ. ಸಂವಿಧಾನ ಬದಲಾವಣೆ ಮೂಲಕ ಅಲ್ಪಸಂಖ್ಯಾತರಿಗೆ ನ್ಯಾಯ ಕೊಡುತ್ತೇವೆ ಎಂಬ ಭ್ರಮೆಯಲ್ಲಿ ಸರಕಾರ ಮುಳುಗಿದೆ. ಬಿಜೆಪಿ ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಅವಕಾಶ ನೀಡಲು ಬಿಡುವುದಿಲ್ಲ ಎಂದು ತಿಳಿಸಿದರು.
ಮಾಜಿ ಎಂಎಲ್ ಸಿ ಭಾರತಿ ಶೆಟ್ಟಿ ಮಾತನಾಡಿ, ಧರ್ಮ, ಜಾತಿ-ಜಾತಿಗಳ ಮಧ್ಯೆ ವೈಮನಸ್ಸು ಬಿತ್ತುವ ಸರಕಾರವಿದ್ದರೆ ಅದು ಕಾಂಗ್ರೆಸ್ ಸರಕಾರ. ಸಾಮಾಜಿಕ ನ್ಯಾಯಾ ಎಲ್ಲರಿಗೂ ಸಿಗಬೇಕು ಎಂಬ ನಿಟ್ಟಿನಲ್ಲಿ ರಚಿಸಲಾದ ಸಂವಿಧಾನವನ್ನು ಬದಲಾಯಿಸುವ ಮೂಲಕ ಸಂವಿಧಾನ ಹಾಗೂ ಡಾ.ಅಂಬೇಡ್ಕರ್ ಅವರಿಗೆ ಅವಮಾನ ಮಾಡಲು ಹೊರಟಿದೆ. ಈ ಮೂಲಕ ಒಂದೆಡೆ ಅಂಬೇಡ್ಕರ್ ಹೊಗಳಿಕೆ, ಇನ್ನೊಂದೆಡೆ ಅವಮಾನ ಮಾಡುತ್ತಿದೆ ಎಂದ ಅವರು, ಬಜೆಟ್‍ನಲ್ಲಿ 25 ಸಾವಿರ ಮುಸ್ಲಿಂ ಹೆಣ್ಣುಮಕ್ಕಳ ಆತ್ಮರಕ್ಷಣೆಗೆ ತರಬೇತಿ ನೀಡಲು ಅನುದಾನ ಇಡಲಾಗಿದೆ ಎನ್ನುತ್ತಾರೆ. ನಿಜವಾಗಿ ಹಿಂದೂ ಹೆಣ್ಣುಮಕ್ಕಳು ತಮ್ಮ ಆತ್ಮ ರಕ್ಷಣೆಯ ಪರಿಸ್ಥಿತಿಯಲ್ಲಿರುವುದು. ಅವರಿಗೂ ತರಬೇತಿ ನೀಡುವ ಕುರಿತು ಮಾತನಾಡಲಿ. ಇದೀಗ ಅಲ್ಪಸಂಖ್ಯಾತರ ಒಲೈಕೆ, ಓಟು ಬ್ಯಾಂಕ್ ಗೋಸ್ಕರ ಸಂವೀಧಾನ ಬದಲಾವಣೆಗೆ ಹೊರಟಿರುವುದಕ್ಕೆ ಬಿಜೆಪಿ ವಿರೋಧವಿದೆ ಎಂದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಚಂದ್ರಶೇಖರ ರಾವ್ ಬಪ್ಪಳಿಗೆ. ಬೂಡಿಯಾರ್ ರಾಧಾಕೃಷ್ಣ ರೈ, ಮುರಳೀಕೃಷ್ಣ ಹಸಂತಡ್ಕ, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಹರೀಶ್ ಬಿಜತ್ರೆ, ಹರಿಪ್ರಸಾದ್ ಯಾದವ್, ಮತ್ತಿತರ ನಗರಸಭೆ ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರತಿಭಟನೆ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕೃತಿ ದಹಿಸಲಾಯಿತು.