ರೌಡಿಶೀಟರ್ ಕಾಂಗ್ರೆಸ್ ಮುಖಂಡನ ಸೇರ್ಪಡೆಗೆ ಸಚಿವ ದಿನೇಶ್ ಗುಂಡೂರಾವ್ ಶಿಫಾರಸ್ಸು
ಮಂಗಳೂರು: ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ದೇವಸ್ಥಾನಗಳ ಪೈಕಿ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿಗೆ ಮಾಜಿ ರೌಡಿಶೀಟರ್ ಆಗಿರುವ ಕಾಂಗ್ರೆಸ್ ಮುಖಂಡರೊಬ್ಬರನ್ನು ಸೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುಂದಾಗಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಈ ಕಾಂಗ್ರೆಸ್ ಮುಖಂಡ ಹಿಂದೆ ನಕಲಿ ಚೆಕ್ ನೀಡಿ ಹಣ್ಣುಕಾಯಿ ಟೆಂಡರ್ ಮಾಡಿ ದೇವಸ್ಥಾನಕ್ಕೆ ವಂಚಿಸಿದ ಪ್ರಕರಣವಿದೆ. ಮಾಜಿ ರೌಡಿಶೀಟರ್ ಆಗಿರುವ ಈ ಮುಖಂಡ ಅರೆಸ್ಟ್ ಕೂಡ ಆಗಿದ್ದರು. ಇದಲ್ಲದೆ ಅವರ ವಿರುದ್ಧ ಮರಳು ಮಾಫಿಯಾ, ಮರ ಕಳ್ಳ ಸಾಗಾಟದಲ್ಲಿ ತೊಡಗಿಸಿಕೊಂಡಿರುವ ಆರೋಪವೂ ಇದೆ. ಇಂತಹ ವ್ಯಕ್ತಿಗೆ ದೇವಳದ ಆಡಳಿತ ಮಂಡಳಿಯಲ್ಲಿ ಜಾಗ ಕೊಡಲು ಸಚಿವರು ಮುಂದಾಗಿದ್ದಾರೆ ಎನ್ನಲಾಗಿದೆ.
ದೇವಸ್ಥಾನದ ಆಡಳಿತ ಮಂಡಳಿಗೆ ದೇವಸ್ಥಾನದ ಹಿತಾಸಕ್ತಿಗೆ ವಿರುದ್ಧ ಇದ್ದವರು ಸದಸ್ಯ ಆಗಬಾರದು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೊಮ್ಮೆ ಕ್ರಿಮಿನಲ್ ಹಿನ್ನೆಲೆ ಇರುವ ಮತ್ತು ದೇವಸ್ಥಾನಕ್ಕೇ ವಂಚಿಸಿರುವ ವ್ಯಕ್ತಿಯನ್ನು ಆಡಳಿತ ಮಂಡಳಿಗೆ ಸೇರಿಸಿಕೊಳ್ಳಬಾರದು ಎಂದು ಗ್ರಾಮಸ್ಥರು ಪ್ರತಿಭಟಿಸಿದ್ದರು ಮತ್ತು ಈ ವಿಚಾರವಾಗಿ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿಯವರಿಗೆ ಗ್ರಾಮಸ್ಥರು ಪತ್ರ ಬರೆದಿದ್ದರು. ಇದೀಗ ದಿನೇಶ್ ಗುಂಡೂರಾವ್ ಈ ವ್ಯಕ್ತಿಯನ್ನು ಆಡಳಿತ ಮಂಡಳಿಗೆ ಸೇರಿಸಿಕೊಳ್ಳಲು ರಾಮಲಿಂಗಾ ರೆಡ್ಡಿಯವರಿಗೆ ಪತ್ರ ಬರೆದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕುಕ್ಕೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.