12 ತಾಸಿನಲ್ಲಿ ಮುಂಬಯಿಯಿಂದ ಮಂಗಳೂರು ತಲುಪಲಿರುವ ರೈಲು
ಮಂಗಳೂರು: ಮುಂಬಯಿಯಲ್ಲಿ ನೆಲೆಸಿರುವ ಕರಾವಳಿ ಭಾಗದ ಜನರಿಗೆ ರೈಲ್ವೆ ಸಿಹಿಸುದ್ದಿ ನೀಡಿದೆ. ಭಾರಿ ಜನಮೆಚ್ಚುಗೆಗೆ ಪಾತ್ರವಾಗಿರುವ ವಂದೇ ಭಾರತ್ ರೈಲು ಸೇವೆ ಮಂಗಳೂರು-ಮುಂಬಯಿ ಮಧ್ಯೆ ಶುರುವಾಗಲಿದ್ದು, ಇದಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಪ್ರಸ್ತುತ ಮುಂಬಯಿ-ಮಂಗಳೂರು ನಡುವಿನ ರೈಲು ಪ್ರಯಾಣಕ್ಕೆ 15-16 ತಾಸು ಹಿಡಿಯುತ್ತದೆ. ವಂದೇ ಭಾರತ್ ರೈಲು ಕೇವಲ 12 ತಾಸಿನಲ್ಲಿ ತಲುಪುತ್ತದೆ. ಹೀಗಾಗಿ ವಂದೇ ಭಾರತ್‌ನಿಂದ ಜನರ ಸಮಯ ಬಹಳಷ್ಟು ಉಳಿತಾಯವಾಗಲಿದೆ. ವಂದೇ ಭಾರತ್ ಪ್ರಯಾಣ ಆರಾಮದಾಯಕವೂ ಹೌದು. ರೈಲ್ವೆ ಇಲಾಖೆ ಮುಂಬಯಿ-ಮಂಗಳೂರು ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸಲು ಎಲ್ಲ ಸಿದ್ಧತೆ ಮಾಡುತ್ತಿದೆ. ಈಗಾಗಲೇ ಮಂಗಳೂರು-ಗೋವಾ ಹಾಗೂ ಗೋವಾ-ಮುಂಬಯಿ ನಡುವೆ ವಂದೇ ಭಾರತ್ ರೈಲು ಸಂಚರಿಸುತ್ತಿದೆ. ಆದರೆ ಈ ಎರಡೂ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ನಿಬಹಳ ಕಡಿಮೆ ಇದ್ದು, ನಷ್ಟದಲ್ಲಿ ಓಡುತ್ತಿದೆ. ಪ್ರಯಾಣಿಕರ ಸಂಖ್ಯೆ ಸರಾಸರಿ ಶೇಕಡಾ 70 ಮಾತ್ರ ಇದೆ. ಅದರಲ್ಲೂ ಮಂಗಳೂರು-ಗೋವಾ ರೈಲಿನ ಪ್ರಯಾಣಿಕರ ಸಂಖ್ಯೆ ಸರಾಸರಿ ಶೇಕಡಾ 40 ಮಾತ್ರ. ಹೀಗಾಗಿ ರೈಲ್ವೆ ಇಲಾಖೆ ಈ ರೈಲನ್ನು ಸ್ಥಗಿತಗೊಳಿಸಲು ಮುಂದಾಗಿತ್ತು.
ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಇತ್ತೀಚೆಗೆ ರೈಲ್ವೆ ಸಚಿವರನ್ನು ಭೇಟಿ ಮಾಡಿ ವಂದೇ ಭಾರತ್ ರೈಲು ಸ್ಥಗಿತಗೊಳಿಸುವ ಬದಲು ಮುಂಬಯಿ ತನಕ ವಿಸ್ತರಿಸಿದರೆ ಪ್ರಯಾಣಿಕರ ಕೊರತೆಯಾಗದು ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಈಗ ರೈಲ್ವೆ ಇಲಾಖೆ ಮಂಗಳೂರು-ಮುಂಬಯಿ ನಡುವೆ ವಂದೇ ಭಾರತ್ ಓಡಿಸಲು ಸಿದ್ಧತೆ ನಡೆಸಿದೆ.

ಆರಂಭದಲ್ಲಿ ಮುಂಬಯಿ-ಮಂಗಳೂರು-ಕೋಝಿಕ್ಕೋಡ್ ಮಧ್ಯೆ ವಂದೇ ಭಾರತ್ ರೈಲು ಓಡಿಸಲು ಪ್ರಸ್ತಾವನೆ ಇಡಲಾಗಿತ್ತು. ಆದರೆ ಪ್ರತಿಬಾರಿ ಮಂಗಳೂರು ಡಿವಿಶನ್‌ನ ರೈಲು ಸೇವೆ ಕೇರಳದ ಪಾಲಾಗುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕದ ನಾಯಕರು ಮುಂಬಯಿ-ಮಂಗಳೂರು ವಂದೇ ಭಾರತ್ ರೈಲನ್ನು ಕೋಝಿಕ್ಕೋಡ್‌ಗೆ ವಿಸ್ತರಣೆ ಮಾಡುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇದೀಗ ಮುಂಬಯಿ-ಮಂಗಳೂರು ವಂದೇ ಭಾರತ್ ರೈಲು ಯೋಜನೆ ಅಂತಿಮಗೊಂಡಿದೆ. ಈ ರೈಲಿನ ಸಮಯ, ನಿಲುಗಡೆ ಇತ್ಯಾದಿಗಳು ಇನ್ನಷ್ಟೇ ಅಂತಿಮವಾಗಬೇಕಾಗಿದೆ.