ನೆಟ್‌ವರ್ಕ್ ಇಲ್ಲದೆ ತುರ್ತು ಸಂದರ್ಭದಲ್ಲಿ ಉಂಟಾದ ಸಮಸ್ಯೆಯನ್ನು ವಿವರಿಸಿದ್ದಾರೆ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್
ಮಂಗಳೂರು: ಜೈಲಿನಲ್ಲಿರುವ ಕೈದಿಗಳು ಮೊಬೈಲ್ ಫೋನ್ ಬಳಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜೈಲಿನೊಳಗೆ ಜಾಮರ್‌ಗಳನ್ನು ಜೈಲು ಅಧಿಕಾರಿಗಳು ಅಳವಡಿಸುತ್ತಾರೆ. ಆದರೆ ಈ ಜಾಮರ್‌ಗಳು ಜೈಲಿನ ಸುತ್ತುಮುತ್ತಲಿನ ಸಮಾರು 1 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಮೊಬೈಲ್‌ಗಳ ನೆಟ್‌ವರ್ಕ್ ಸಂಪರ್ಕವನ್ನು ತೀವ್ರವಾಗಿ ಬಾಧಿಸುತ್ತವೆ. ಜನರು ನಿತ್ಯ ಮೊಬೈಲ್ ನೆಟ್‌ವರ್ಕ್ ಇಲ್ಲದೆ ಪರದಾಡಬೇಕಾಗುತ್ತದೆ. ಇದು ಕೆಲವು ತುರ್ತು ಸಂದರ್ಭದಲ್ಲಿ ಭಾರಿ ಅನಾಹುತಗಳಿಗೆ ಎಡೆಮಾಡಿಕೊಡಬಹುದು. ಇಂಥ ಒಂದು ಪರಿಸ್ಥಿಯನ್ನು ಮಂಗಳೂರಿನ ಖ್ಯಾತ ಹೃದ್ರೋಗ ತಜ್ಞ, ಮಾನವೀಯ ಕಾಳಜಿಯಳ್ಳ ವೈದ್ಯರೆಂದೇ ಅರಿಯಲ್ಪಡುವ ಮಂಗಳುರು ಕೆಎಂಸಿಯ ಡಾ.ಪದ್ಮನಾಭ ಕಾಮತ್ ಹಂಚಿಕೊಂಡಿದ್ದಾರೆ.
ಮಂಗಳೂರಿನ ಕೋಡಿಯಾಲಬೈಲಿನಲ್ಲಿರುವ ಜೈಲಿನಲ್ಲೂ ಮೊಬೈಲ್ ನೆಟ್‌ವರ್ಕ್ ಜಾಮರ್‌ಗಳನ್ನು ಅಳವಿಡಿಸಿದ್ದಾರೆ. ಈ ಜಾಮರ್ ಅಳವಡಿಸಿದ ಬಳಿಕ ನಿತ್ಯ ಈ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಣಿಸಿಕೊಂಡಿದೆ. ಡಾ.ಪದ್ಮನಾಭ ಕಾಮತ್ ಕೊಡಿಯಾಲ್‌ಬೈಲಿನಲ್ಲೇ ವಾಸವಾಗಿದ್ದಾರೆ. ಇವರಲ್ಲದೆ ರಾಜಕೀಯ ಮುಖಂಡರು, ಹಲವು ವೈದ್ಯರು, ವೃತ್ತಿಪರರು ಮತ್ತು ಪ್ರಮುಖರು ಈ ಪ್ರದೇಶದಲ್ಲಿ ವಾಸವಾಗಿದ್ದಾರೆ.
ಮಾ.23ರಂದು ರಾತ್ರಿ ಹೊರನಾಡಿನ ಓರ್ವ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿತ್ತು. ಈ ರೋಗಿಯ ಕಡೆಯವರು ಆಸ್ಪತ್ರೆಗೆ ಹೊರಡುವಾಗಲೇ ಡಾ.ಕಾಮತ್ ಅವರಿಗೆ ವಿಷಯ ತಿಳಿಸುವ ಸಲುವಾಗಿ ಫೋನ್ ಮಾಡಲಾರಂಭಿಸಿದ್ದರು. ಆದರೆ ನೆಟ್‌ವರ್ಕ್ ಸಮಸ್ಯೆ ಇದ್ದ ಕಾರಣ ಅವರಿಗೆ ಫೋನ್ ಕಾಲ್ ತಲುಪಿಲಿಲ್ಲ. ಇದು ಬಹಳ ತುರ್ತು ಕೇಸ್ ಆಗಿತ್ತು. ಕೊನೆಗೆ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು ಮನೆಗೆ ಬಂದು ವಿಷಯ ತಿಳಿಸಿದಾಗ ಡಾ.ಕಾಮತ್ ಆಸ್ಪತ್ರೆಗೆ ಧಾವಿಸಿ ರೋಗಿಗೆ ಚಿಕಿತ್ಸೆ ನೀಡಿ ಆತನ ಪ್ರಾಣ ಉಳಿಸಿದರು. ಎಲ್ಲಿಯಾದರೂ ಆ ಹೊತ್ತಿಗೆ ಸರಿಯಾಗಿ ತನಗೆ ಸುದ್ದಿ ತಿಳಿಯದಿರುತ್ತಿದ್ದರೆ ಪರಿಸ್ಥಿತಿ ಗಂಭೀರವಾಗುತ್ತಿತ್ತು ಎಂದು ಡಾ.ಕಾಮತ್ ತಿಳಿಸಿದ್ದಾರೆ.
ಮೊಬೈಲ್ ಜಾಮರ್ ಸಾರ್ವಜನಿಕ ಹಿತದೃಷ್ಟಿಗೆ ಸಮಸ್ಯೆ ತಂದೊಡ್ಡುತ್ತಿದೆ. ನಿರ್ದಿಷ್ಟವಾಗಿ ವೈದ್ಯರು, ಪೊಲೀಸರಂಥ ವೃತ್ತಿಪರರು ದಿನದ 24 ತಾಸು ತುರ್ತ ಕರೆಗಳಿಗೆ ಸ್ಪಂದಿಸುತ್ತಿರಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಕರೆಯೇ ತಲುಪದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ಮಂಗಳೂರು ಪೊಲೀಸ್ ಕಮಿಷನರ್, ಮಂಗಳೂರು ನಗರಪಾಲಿಕೆ, ಸ್ಥಳೀಯ ಶಾಸಕರು ಜೈಲಿನ ಭದ್ರತೆಗೆ ಧಕ್ಕೆಯಾಗದಂತೆ ಈ ಸಮಸ್ಯೆಯನ್ನು ನಿವಾರಿಸಿ ನೆಟ್‌ವರ್ಕ್ ಸಮರ್ಪಕವಾಗಿ ಸಿಗುವಂತೆ ಮಾಡಬೇಕೆಂದು ಡಾ.ಕಾಮತ್ ವಿನಂತಿಸಿದ್ದಾರೆ.