ಹೈಕಮಾಂಡನ್ನು ವಿಕೃತವಾಗಿ ಖುಷಿಪಡಿಸುವ ಚಾಳಿ : ಬಿ.ಕೆ.ಹರಿಪ್ರಸಾದ್‌ಗೆ ಬಿಜೆಪಿ ತಿರುಗೇಟು

ರಾಜ್ಯ ರಾಜಕಾರಣದಲ್ಲಿ ಪ್ರಾಮುಖ್ಯತೆಯಿಲ್ಲದ ರಾಜಕಾರಣಿ ಎಂದು ಲೇವಡಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಹನಿಟ್ರ್ಯಾಪ್ ಪಿತಾಮಹ ಎಂದು ಟೀಕಿಸಿರುವ ವಿಧಾನ ಪರಿಷತ್ತಿನ ಕಾಂಗ್ರೆಸ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ಹನಿಟ್ರ್ಯಾಪ್ ಕುರಿತಾದ ಹೇಳಿಕೆ ನಿಮ್ಮ ಮಲಿನಗೊಂಡ ಮನಸ್ಥಿತಿ, ಹರಕು ನಾಲಗೆಯ ವ್ಯಕ್ತಿತ್ವವನ್ನು ಪರಿಚಯಿಸಿದೆ. ನಾಮಕರಣ ಅಧಿಕಾರ ಬಲದಿಂದ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ನೀವು, ಕೀಳು ಅಭಿರುಚಿಯ ಹೇಳಿಕೆಗಳನ್ನು ನೀಡಿ ನಿಮ್ಮ ಹೈಕಮಾಂಡ್ ಅಂಗಳವನ್ನು ವಿಕೃತ ಖುಷಿ ಪಡಿಸಲು ಹೊರಟಿದ್ದೀರಿ ಎಂಬುದು ಬಹಿರಂಗ ಸತ್ಯ ಎಂದು ಹೇಳಿದೆ.

ಆಕಾಶಕ್ಕೆ ಉಗುಳಿದರೆ ನಾನು ದೊಡ್ಡ ಮನುಷ್ಯನಾಗುತ್ತೇನೆ ಎಂಬ ಹುಂಬತನದಲ್ಲಿ ಅತಿರೇಕದ, ಅವಿವೇಕದ, ಕೊಳಕು ಹೇಳಿಕೆಗಳನ್ನು ಬಿ.ಕೆ ಹರಿಪ್ರಸಾದ್ ನೀಡುತ್ತಿದ್ದಾರೆ. ಸ್ವಾತಂತ್ರ್ಯಾನಂತರ ಭಾರತದಲ್ಲಿ ಕಾಂಗ್ರೆಸ್ ಆಳ್ವಿಕೆಯ ಕೊಳಕುಗಳನ್ನು ಸ್ವಚ್ಛ ಮಾಡಿದ್ದು, ಮಹಾತ್ಮ ಗಾಂಧಿಯವರು ಆರಂಭಿಸಿದ ಸ್ವಚ್ಛ ಭಾರತ ಹಾಗೂ ಸ್ವದೇಶಿ ಚಳವಳಿಯ ಕನಸನ್ನು ಅಕ್ಷರಶಃ ನನಸು ಮಾಡಿದ್ದು ಪ್ರಧಾನಿ ಪ್ರಧಾನಿ ಮೋದಿ ಎನ್ನುವುದನ್ನು ನೀವೂ ಸೇರಿದಂತೆ ನಿಮ್ಮ ಕಾಂಗ್ರೆಸ್ಸಿಗರು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ,

































 
 

ನಿಮ್ಮ ಪಕ್ಷದ ತಟ್ಟೆಯಲ್ಲಿ ಹಗರಣಗಳು ಎಂಬ ಹೆಗ್ಗಣಗಳು ಸತ್ತು ಬಿದ್ದಿವೆ ಇದರ ಬೆನ್ನಲೇ ವಿಕೃತಿ ಮನಸ್ಥಿಯ ಸೇಡಿನ ರಾಜಕಾರಣದ ಹನಿಟ್ರ್ಯಾಪ್ ದಳ್ಳುರಿ ನಿಮ್ಮ ಕಾಂಗ್ರೆಸ್ ಮನೆಯನ್ನು ಸುಡುತ್ತಿದೆ, ಇಷ್ಟಾದರೂ ಪಾಠ ಕಲಿಯದ ನೀವು ಪರಿಶುದ್ಧ ಸರೋವರಕ್ಕೆ ಮಲಿನಗೊಂಡ ಕಲ್ಲು ಎಸೆಯುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದೀರಿ. ನೀವು ರಾಜ್ಯ ರಾಜಕಾರಣದಲ್ಲಿ ಪ್ರಾಮುಖ್ಯತೆಯಿಲ್ಲದ ರಾಜಕಾರಣಿ ಎಂಬುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ವಲಯದಲ್ಲೂ ನಿಮ್ಮನ್ನು ಮೂಲೆಗೊತ್ತಿದ್ದಾರೆ. ನಿಮಗೆ ಅರ್ಹತೆ, ಯೋಗ್ಯತೆ ಇದ್ದಿದ್ದರೆ ಕಳೆದ ಸರ್ಕಾರದ ಅವಧಿಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರಾಗಿ ಕಾಂಗ್ರೆಸ್‌ನಲ್ಲಿ ಮುಂಚೂಣಿ ನಾಯಕರಾಗಿದ್ದ ನಿಮ್ಮನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಕನಿಷ್ಠ ಮಂತ್ರಿಯಾಗಿಸಲೂ ಪರಿಗಣಿಸಲಿಲ್ಲವೇಕೆ? ಎಂದರೆ ಅರ್ಹತೆಯ ಪಟ್ಟಿಯಲ್ಲಿ ನಿಮಗಿರುವ ಯೋಗ್ಯತೆಯ ಸ್ಥಾನ ಮನನವಾಗುತ್ತದೆ.
ಸದ್ಯ ನೀವೊಬ್ಬ ವಿಧಾನ ಪರಿಷತ್ ಸದಸ್ಯರು ಎಂಬ ಸ್ಥಾನ ಗೌರವ ಮಾತ್ರ ನಿಮಗಿದೆಯೇ ಹೊರತು ಸಾಮಾಜಿಕವಾಗಿ, ರಾಜಕೀಯವಾಗಿ ಯಾವ ಕ್ಷೇತ್ರದಲ್ಲೂ ಗೌರವದ ಸ್ಥಾನ ಉಳಿಸಿಕೊಂಡಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ನಿಮ್ಮ ಕೊಳಕು ಹೇಳಿಕೆಗಳಿಗೆ ಬಿಜೆಪಿ ತಲೆಕೆಡಿಸಿಕೊಳ್ಳುವುದಿಲ್ಲ, ಆದರೆ ಪ್ರಧಾನಿ ಮೋದಿ ಅವರನ್ನು ಪದೇಪದೆ ಉಲ್ಲೇಖಿಸಿ ವಿಕೃತ ಪ್ರಚಾರ ಪಡೆಯುವ ನಿಮ್ಮ ಹೀನ ನಡೆಯನ್ನು ಜನರ ಮುಂದಿಡಲು ಮಾತ್ರ ಪ್ರತಿಕ್ರಿಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top