ಪುತ್ತೂರು: ಮಂಗಳೂರಿನ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಅಧೀನಕ್ಕೊಳಪಟ್ಟ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಯುಜಿಸಿಯಿಂದ ಮಂಗಳೂರು ವಿಶ್ವವಿದ್ಯಾನಿಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟಿದ್ದು, ಉದ್ಘಾಟನಾ ಸಮಾರಂಭ ಶನಿವಾರ ಕಾಲೇಜಿನ ಆವರಣದಲ್ಲಿ ನಡೆಯಿತು.

ಬೆಂಗಳೂರು ಮಹಾನಗರ ಮೆಟ್ರೊಪೊಲಿಟನ್ ಧರ್ಮಪ್ರಾಂತ್ಯದ ಆರ್ಚ್ ಭಿಷಪ್ ಪರಮ ಪೂಜ್ಯ ಡಾ. ಪೀಟರ್ ಮಚಾದೋರವರು ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನರು ವಿಮರ್ಶಾತ್ಮಕ ಚಿಂತನೆ, ಜೀವನ ಪರ್ಯಂತ ಕಲಿಕೆಯ ಬಗ್ಗೆ ಒಲವು, ಸಮರ್ಪಕ ಸಂವಹನ ಹಾಗೂ ಅವಿಷ್ಕಾರಕ್ಕೆ ಕಾರಣವಾಗುವಂತಹ ಶಿಕ್ಷಣ ದೊರೆತಲ್ಲಿ ಇತಿಹಾಸ ಸೃಷ್ಠಿಸಬಹುದು. ಕಾಲೇಜಿಗೆ ಸಂಬಂಧಿಸಿದ ಎಲ್ಲಾ ವ್ಯಕ್ತಿಗಳ ಮೇಲೂ ದೇವ ಕೃಪೆಯಿರಲಿ ಎಂದು ಆಶೀರ್ವದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪರಮ ಪೂಜ್ಯ ಡಾ.ಪೀಟರ್ ಪಾವ್ಲ್ ಸಲ್ದಾನ ಮಾತನಾಡಿ, ವಿದ್ಯೆ ಇದ್ದರೆ ಮಾತ್ರ ಸಾಲದು ವಿನಯವೂ ಇರಬೇಕು. ನೀವು ಜೀವನದಲ್ಲಿ ಉನ್ನತ ಹುದೆಯನ್ನಲಂಕರಿಸಿದ್ದರೂ ಮಾನವೀಯ ಮೌಲಗಳನ್ನು ಮರೆಯಬಾರದು. ಎಲ್ಲಾ ರೀತಿಯ ಜನರನ್ನೂ ಪ್ರೀತಿಸುವ ಹೃದಯ ವೈಶಾಲ್ಯವಿರಬೇಕು. ನಿಮ್ಮೊಂದಿಗೆ ಇತರರನ್ನೂ ಬೆಳೆಸುವ ಒಳ್ಳೆಯ ಗುಣವಿರಬೇಕು. ಸ್ವಾಯತ್ತ ಸಂಸ್ಥೆಯಲ್ಲಿ ಪ್ರತಿಯೋರ್ವನೂ ತನ್ನ ಕರ್ತವ್ಯ ನಿರ್ವಹಿಸುವ ಪ್ರತಿಯೋರ್ವ ವ್ಯಕ್ತಿಯೂ ತನ್ನ ಜವಾಬ್ದಾರಿಯನ್ನರಿತು ಕರ್ತವ್ಯ ನಿರ್ವಹಿಸಬೇಕು ಎಂದರು.
ಸ್ವಾಯತ್ತ ಕಾಲೇಜಿನ ಲಾಂಛನವನ್ನು ಹಾಗೂ ಪರಿಷ್ಕರಿಸಲಾದ ಕಾಲೇಜು ವೆಬ್ ಸೈಟ್ ನ್ನು ಬಿಡುಗಡೆಗೊಳಿಸಿ ಮಾತನಾಡಿದ ದಕ್ಷಿಣ ಕನ್ನಡದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, “ಮೌಲ್ಯಾಧಾರಿಕ ಶಿಕ್ಷಣವನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ನೀಡುವ ಕರಾವಳಿಯ ಹೆಮ್ಮೆಯ ಸಂಸ್ಥೆ ಸಂತ ಫಿಲೋಮಿನಾ ಸಂಸ್ಥೆ. ಕಲಿಕೆಯಲ್ಲ್ಲಿ ಮಾತ್ರವಲ್ಲದೆ ರಾಷ್ಟ್ರಕ್ಕೆ ಹಲವಾರು ಪ್ರಜ್ಞಾವಂತ ಪ್ರತಿಭೆಗಳನ್ನು ನೀಡಿರುತ್ತದೆ ಎಂದರು.
ಸ್ವಾಯತ್ತ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಉದ್ಯೋಗ ಕ್ಷೇತ್ರದ ಬೇಡಿಕೆಗಳಿಗೆ ಅನುಗುಣವಾದ ಪಠ್ಯಕ್ರಮವನ್ನು ರಚಿಸುವುದು ಮಾತ್ರ ಸ್ವಾಯತ್ತ ಸಂಸ್ಥೆಯ ಜವಾಬ್ದಾರಿಯಲ್ಲ. ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಟಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿಸುವ ಪಠ್ಯಕ್ರಮವನ್ನು ಒದಗಿಸುವ ಜವಾಬ್ದಾರಿ ಸ್ವಾಯತ್ತ ಸಂಸ್ಥೆಗಿದೆ. ಇಲ್ಲಿಯವರೆಗೆ ಸಂಸ್ಥೆ ಮಾಡಿಕೊಂಡು ಬಂದಿರುವ ಆ ಕೆಲಸಗಳನ್ನು ಮುಂದುವರೆಸಬೇಕು ಎಂದು ಅಭಿಪ್ರಾಯಪಟ್ಟರು.
ಸ್ವಾಯತ್ತ ಸ್ಥಾನಮಾನ ದೊರೆತ ಸವಿ ನೆನಪಿಗಾಗಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ “ಫಿಲೋ ಜೆನೆಸಿಸ್” ನ್ನು ಬಿಡುಗಡೆಗೊಳಿಸಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಕೈಸ್ತ ವಿದ್ಯಾಸಂಸ್ಥೆಗಳು ನೀಡಿದ ಕೊಡುಗೆ ಅಪಾರ. ಧರ್ಮಗುರುಗಳು ಒಂದು ಚರ್ಚ್ ನಿರ್ಮಿಸಿದರೆಂದಾದಲ್ಲಿ ಅದರ ಬಳಿಯಲ್ಲೊಂದು ಶಾಲೆಯನ್ನು ನಿರ್ಮಿಸಿ ಸಮಾಜದ ಎಲ್ಲಾ ವರ್ಗದ ಜನರಿಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಅನುವು ಮಾಡಿಕೊಡುವುದು ಅವರ ಹಿರಿಮೆ ಎಂದರು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಹಲವು ದಶಕಗಳಿಂದ ಸಾವಿರಾರು ಯುವ ಮನಸ್ಸುಗಳಲ್ಲಿ ಜ್ಞಾನದ ಬೀಜ ಬಿತ್ತುತ್ತಿರುವ ಸಂತ ಫಿಲೋಮಿನಾ ಕಾಲೇಜು ಸ್ವಾಯತ್ತ ಸ್ಥಾನಮಾನಗಳೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ, ಸೃಜನಶೀಲ ಚಿಂತನೆ, ಉದ್ಯಮಶೀಲತೆ, ನಾಯಕತ್ವ ಮತ್ತು ಸಂಶೋಧನೆಗೆ ದಾರಿದೀಪವಾಗಲಿ ಎಂದರು. ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿದ ಫಿಲೋಮಿನಾ ಶಿಕ್ಷಣಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ ಎಂದರು.
ಸ್ವಾಯತ್ತ ಕಾಲೇಜಿಗೆ ರಿಜಿಸ್ಟ್ರಾರ್ ಆಗಿ ನೇಮಕಗೊಂಡವರನ್ನು ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ. ಡಾ. ಪ್ರವೀಣ್ ಲಿಯೋ ಲಸ್ರಾದೊ ಸನ್ಮಾನಿಸಿದರು.
ಅತಿಥಿಗಳಾಗಿ ಮಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕಿ ಡಾ. ಕವಿತಾ ಕೆ.ಆರ್., ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಸ್ಟೆಲ್ಲಾ ವರ್ಗೀಸ್, ಕ್ಯಾಥೊಲಿಕ್ ಶಿಕ್ಷಣ ಮಂಡಳಿ ನಿಕಟಪೂರ್ವ ಕಾರ್ಯದರ್ಶಿ ವಂ. ಆಂಟನಿ ಮೈಕೆಲ್ ಶೆರಾ ಶುಭ ಹಾರೈಸಿದರು.
ವೇದಿಕೆಯಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರು ವಂ. ಮ್ಯಾಕ್ಸಿಮ್ ನೊರೊನ್ಹ, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಪ್ರತಿಮಾ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಎ.ಎಂ. ಅಬ್ದುಲ್ ಕುಞ್ಞಿ ಉಪಸ್ಥಿತರಿದ್ದರು.

ಕಾಲೇಜಿನ ಸಂಚಾಲಕ ಅತಿ ವಂ. ಲಾರೆನ್ಸ್ ಮಸ್ಕರೇನಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಿನ್ಸಿಪಾಲ್ ವಂ. ಡಾ. ಆಂಟನಿ ಪ್ರಕಾಶ್ ಮೊಂತೇರೊ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಭಾರತಿ ಎಸ್. ರೈ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ. ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು.