ಪ್ರತಿಷ್ಠಿತ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರಿಗೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ನೀಡಬೇಕು : ಡಿ.ಬಿ.ಬಾಲಕೃಷ್ಣ

ಸುಬ್ರಹ್ಮಣ್ಯ: ಪ್ರತಿಷ್ಠಿತ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರು ಹಾಗೂ ಇವರ ಪೂರ್ವಿಕರು ಶ್ರೀ ಕ್ಷೇತ್ರಕ್ಕೆ ಸಲ್ಲಿಸಿದ ದೇವತಾ ಹಾಗೂ ಸೇವಾ ಕೈಂಕರ್ಯವನ್ನು ಪರಿಗಣಿಸಿ ಕೂಜುಗೋಡು ಕಟ್ಟೆಮನೆ ಕುಟುಬಂಸ್ಥರಿಗೆ ಹಾಗೂ ಮಲೆಕುಡಿಯ ಜನಾಂಗದವರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಮಂಡಳಿಯಲ್ಲಿ ಸದಸ್ಯತ್ವ ಕಲ್ಪಿಸಬೇಕು ಎಂದು ಆಗ್ರಹ ಕೇಳಿ ಬಂದಿದೆ.

ಹಿಂದಿನಿಂದಲೂ ಯಾವುದೇ ಸರಕಾರವಿದ್ದಾಗಲೂ ಕೂಜುಗೋಡು ಕುಟುಂಬಸ್ಥರಿಗೆ ಸೇರಿದ ಒಬ್ಬರಿಗೆ ಹಾಗೂ ಮಲೆಕುಡಿಯ ಜನಾಂಗದ ಓರ್ವರಿಗೆ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತ್ವವನ್ನು ನೀಡುತ್ತಾ ಬಂದಿದೆ. ಅದರಂತೆ ಈ ಭಾರಿಯೂ ಅವಕಾಶ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಒಕ್ಕಲಿಗ ಗೌಡ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ.ಬಾಲಕೃಷ್ಣ ಗೌಡ ತಿಳಿಸಿದ್ದಾರೆ.

ಕೂಜುಗೋಡು ಕಟ್ಟೆಮನೆ ಕುಟುಂಬಕ್ಕೂ ಶ್ರೀ ದೇವಳಕ್ಕೂ ಪುರಾತನ ಕಾಲದಿಂದ ಸಂಬಂಧ ಹೊಂದಿದ್ದು ಹಿಂದೆ ಸಿಡುಬಿನಂತಹ  ಮಾರಣಾಂತಿಕ ಕಾಯಿಲೆ ಬಾಧಿಸಿದ ಸಂದರ್ಭದಲ್ಲೂ ಕೂಜುಗೋಡು ಕಟ್ಟೆಮನೆತನದವರು ಶ್ರೀ ದೇವರಿಗೆ ದೀಪ ಉರಿಸಿ ಪೂಜಾ ಕೈಂಕರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ ಎಂಬುದಕ್ಕೆ ಉಲ್ಲೇಖವಿದೆ.

































 
 

ಆರ್ಥಿಕವಾಗಿ ಹಿಂದುಳಿದ ಕಾಲದಲ್ಲಿ ಶ್ರೀ ಕ್ಷೇತ್ರದಲ್ಲಿ ಪೂಜಾ ಕೈಂಕರ್ಯ ನಡೆಸುವುದಕ್ಕೂ ದುಸ್ತರವಾದಾಗ ಚುಕ್ಕಾಣಿ ಹಿಡಿದಿದ್ದ ಕೂಜುಕೋಡು ಕುಟುಂಬದ ಮುಖ್ಯಸ್ಥರು ಶ್ರೀ ದೇವಳದ ಪೂ ಬೇಕಾದ ನೈವೇದ್ಯದ ಅಕ್ಕಿ, ಅನ್ನಸಂತರ್ಪಣಾ ಸಾಮಾಗ್ರಿ ತೆಂಗಿನಕಾಯಿ, ಹಾಲು ವಗೈರಾಧಿಗಳನ್ನು ತಲೆಯ ಮೇಲೆ ಹೊತ್ತು ತಂದು ಸೇವಾ ಕೈಂಕರ್ಯಗಳನ್ನು ಮಾಡಿರುವ ದಾಖಾಲಾತಿಗಳಿವೆ.

1943 ರಿಂದ 1956 ರವರೆಗೆ ಶ್ರೀ ದೇವಳದ ಆಡಳಿತ ನಿರ್ದೇಶಕರಾಗಿ ಹಾಗೂ ಅಡಳಿತ ಮೊತ್ತೇಸರರಾಗಿ ಮೂರು ಅವಧಿಯ ಹದಿನೈದು ವರ್ಷಗಳ ಕಾಲ ಶ್ರೀ ಕ್ಷೇತ್ರವನ್ನು ಮುನ್ನೆಡೆಸಿದ್ದು ಪ್ರಥಮ ಚುನಾವಣಾಧಿಯಿಂದ ಸತತ ಮೂರು ಅವಧಿಗೆ ಶಾಸಕರಾಗಿ ಅಭಿವೃದ್ಧಿಯ ಹರಿಕಾರರೆನಿಸಿಕೊಂಡ ಇವರ ಗೌರವಾರ್ಥವಾಗಿ ಇತ್ತೀಚಿನ ದಿನಗಳಲ್ಲಿ ಭಾರತೀಯ ಅಂಚೆ ಇಲಾಖೆಯ ಶತಮಾನೋತ್ಸವದ ನೆನಪಿಗಾಗಿ ಅಂದಿನ ಕೇಂದ್ರ ಸರಕಾರದ ಪ್ರಧಾನಿಯಾದ ನರೇಂದ್ರ ಮೋದಿಜಿಯವರು ವೆಂಕಟ್ರಮಣ ಗೌಡರ ಭಾವಚಿತ್ರವನ್ನು ಅಂಚೆ ಚಿತ್ರ ಮಾಡಿ ಬಿಡುಗಡೆಗೊಳಿಸಿರುವುದು ಉಲ್ಲೇಖನೀಯ. ಅಂದಿನ ಪ್ರಮುಖರಾದ ದಿವಂಗತ ಕುಶಾಲಪ್ಪ ಗೌಡ ಕೂಜುಗೋಡುರವರು 1938 ರಿಂದ 1943 ರವರೆಗೆ ಆಡಳಿತ ಮೊತ್ತೇಸರರಾಗಿ ಸುಮಾರು ಐದು. ವರ್ಷಗಳ ಕಾಲ ಶ್ರೀ ಕ್ಷೇತ್ರಕ್ಕೆ ಸೇವೆ ಸಲ್ಲಿಸುವುದರ ಜೊತೆಗೆ ಕುಟುಂಬದ ಇನ್ನೊಬ್ಬ ಹಿರಿಯರಾದ, ಬೆಳ್ತಂಗಡಿ ಮಾಜಿ ಶಾಸಕರಾದ  ದಿವಂಗತ ಕೆ.ಸುಬ್ರಹ್ಮಣ್ಯ ಗೌಡ. 1957 ರಿಂದ 1979 ರವರೆಗಿನ ಸುದೀರ್ಘ ಅವಧಿಗೆ ಆಡಳಿತ ಮೊಕ್ತಸರರಾಗಿ ಸೇವೆ ಸಲ್ಲಿಸಿದ್ದು ಇವರ ಅಧಿಕಾರವಾಧಿಯಲ್ಲಿ ದೇವಸ್ಥಾನದ ಸುತ್ತುಪೌಳಿ ದೇವಸ್ಥಾನದ ಮುಂಭಾಗದ ಗೋಪುರವನ್ನು ನಿರ್ಮಿಸಿ ಮೈಸೂರು ಒಡೆಯರ್‌ ರವರಿಂದ ಉದ್ಘಾಟಿಸಿದ ಬಗ್ಗೆ ಲಭ್ಯ ದಾಖಲಾತಿಗಳಲ್ಲಿ ಉಲ್ಲೇಖಿತವಾಗಿರುತ್ತದೆ.

ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ದೇವರ ವಾರ್ಷಿಕ ಉತ್ಸವದ “ಶ್ರೀ ಚಂಪಾಷಷ್ಠಿಯ” ಮಹೋತ್ಸವದಲ್ಲಿ ನಡೆಯುವ ವಿಜೃಂಭಣೆಯ ರಥೋತ್ಸವದಲ್ಲಿ ಎಳೆಯಲ್ಪಡುವ ವಿಶೇಷ ರಥವಾದ ಈ ಹಿಂದಿನ ಬ್ರಹ್ಮರಥದ ನಿರ್ಮಾಣಕ್ಕೆ ಕುಟುಂಬದ ವತಿಯಿಂದ ಗಣನೀಯ ದೇಣಿಗೆ ನೀಡಿರುವುದು ಹಲವಾರು ದಾಖಲಾತಿಗಳಲ್ಲಿ ಉಲ್ಲೇಖವಾಗಿದ್ದು ಹಾಗೆಯೇ ಶ್ರೀ ಕ್ಷೇತ್ರದಲ್ಲಿ ಪ್ರತಿವರ್ಷದ ಮಾರ್ಗಶಿರ ಮಾಸದ ಡಿಸೆಂಬರ್ ತಿಂಗಳಲ್ಲಿ ನಡೆಯುವ ಶ್ರೀ ದೇವರ “ಚಂಪಾಷಷ್ಠಿ ಮಹೋತ್ಸವದ” ವಾರ್ಷಿಕ ಜಾತ್ರೆಯ ಪೂರ್ವಭಾವಿಯಾಗಿ ನಡೆಸಲ್ಪಡುವ ಕೊಪ್ಪರಿಗೆ ಮೂಹೂರ್ತದಂದು ಕಟ್ಟೆಮನೆ ಕುಟುಂಬದ ವತಿಯಿಂದ ದೊಡ್ಡ ಪ್ರಮಾಣದಲ್ಲಿ ಹಸಿರುವಾಣಿಯನ್ನು ದೇವಸ್ಥಾನದಿಂದ ನಡೆಸಲ್ಪಡುವ ಅನ್ನಸಂತರ್ಪಣೆಗೆ ಕಾಣಿಕೆಯಾಗಿ ನೀಡುವ ಸಂಪ್ರದಾಯವನ್ನು ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರು ಇಂದಿಗೂ ಪಾಲಿಸಿಕೊಂಡು ಬಂದಿರುತ್ತಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಥಮ ಸ್ವಾತಂತ್ರ್ಯ ಸಮರಕ್ಕೂ ಮುಂಚಿತವಾಗಿ ಸ್ವಾತಂತ್ರ್ಯದ ಕಿಡಿ ಹಚ್ಚಿದ ಅಮರ ಸುಳ್ಯ ದಂಗೆಯಂತಹ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕತ್ವ ವಹಿಸಿದಂತಹ ಮಲ್ಲಪ್ಪ ಅಪ್ಪಯ್ಯರಂತಹ ಅಮರ ಸ್ವಾತಂತ್ರ್ಯ ಸೇನಾನಿಗಳನ್ನು ನೀಡಿ ಶತಮಾನಗಳ ಕಾಲದಿಂದಲೂ ಶ್ರೀ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿ ಆಡಳಿತಾತ್ಮಕವಾಗಿ ವಿವಿಧ ಸ್ತರಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಸ್ಥಳೀಯ ಪ್ರತಿಷ್ಠಿತ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರು ಹಾಗೂ ಇವರ ಪೂರ್ವಿಕರು ಶ್ರೀ ಕ್ಷೇತ್ರಕ್ಕೆ ಸಲ್ಲಿಸಿದ ದೇವತಾ ಹಾಗೂ ಸೇವಾ ಕೈಂಕರ್ಯವನ್ನು ಪರಿಗಣಿಸಿ ಪ್ರಸ್ತುತ ಕುಟುಂಬದವರಿಗೆ ಹಾಗೂ ಮಲೆಕುಡಿಯ ಜನಾಂಗದವರಿಗೂ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತ್ವ ನೀಡಬೇಕೆಂದು ಡಿ.ಬಿ.ಬಾಲಕೃಷ್ಣ ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top