ಹನಿಟ್ರ್ಯಾಪ್‌ನಲ್ಲಿ ದೊಡ್ಡ ದೊಡ್ಡವರ ಕೈವಾಡ ಇದೆ ಎಂದು ಮಾಹಿತಿ
ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಹನಿಟ್ರ್ಯಾಪ್ ಪ್ರಕರಣದ ದಾಖಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಸ್ತಾಂತರಿಸಲಾಗಿದೆ. ಸಚಿವ ರಾಜಣ್ಣ ಪುತ್ರ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ನಿನ್ನೆ ಸಿದ್ದರಾಮಯ್ಯನವರನ್ನು ಭೇಟಿಯಾಗಿ ದಾಖಲೆ ಸಮೇತ ಹನಿಟ್ರ್ಯಾಪ್ ಪ್ರಕರಣದ ಮಾಹಿತಿ ನೀಡಿದ್ದಾರೆ. ಹನಿಟ್ರ್ಯಾಪ್ ಯತ್ನ ಸಂಬಂಧ ಎಲ್ಲ ಸಾಕ್ಷ್ಯಗಳನ್ನು ಸಿಎಂಗೆ ನೀಡಿದ್ದೇನೆ. ಸೋಮವಾರ ಅಥವಾ ಮಂಗಳವಾರ ಡಿಜಿ ಮತ್ತು ಐಜಿಪಿಗೆ ದೂರು ಸಲ್ಲಿಸುವೆ ಎಂದು ಹೇಳಿದ್ದಾರೆ.
ನನಗೆ ಕೂಡ ಹನಿಟ್ರ್ಯಾಪ್ ನಡೆಸಲು ಕಳೆದ 3 ತಿಂಗಳಿಂದ ಯತ್ನ ನಡೆಸಿದ್ದರು. ಹನಿಟ್ರ್ಯಾಪ್ ನಡೆಸಲು ನಮ್ಮ ಮಧುಗಿರಿ ನಿವಾಸಕ್ಕೂ ಬಂದಿದ್ದರು. ಬೆಂಗಳೂರಿನ ಸರ್ಕಾರಿ ನಿವಾಸಕ್ಕೂ ಬಂದು ಹನಿಟ್ರ್ಯಾಪ್‌ಗೆ ಯತ್ನಿಸಿದ್ದರು. ಯಾವ ಕಾರಣಕ್ಕಾಗಿ ನನಗೆ ಹನಿಟ್ರ್ಯಾಪ್‌ಗೆ ಯತ್ನಿಸಿದ್ದರೆಂದು ಗೊತ್ತಿಲ್ಲ. ಯಾರೆಂದು ಹೇಗೆ ಹೇಳೋದು?, ತನಿಖೆಯಾಗಲಿ ಎಲ್ಲ ಹೊರಬರುತ್ತೆ ಎಂದು ರಾಜೇಂದ್ರ ಹೇಳಿದ್ದಾರೆ.
ನಮ್ಮ ತಂದೆಯವರಷ್ಟೇ ಅಲ್ಲ ಯಾರಿಗೂ ಈ ರೀತಿಯಾಗಿ ಆಗಬಾರದು. ಎಲ್ಲರ ಮನೆಯಲ್ಲೂ ಹೆಣ್ಮಕ್ಕಳು ಇರ್ತಾರಲ್ವಾ? ಈ ರೀತ್ರಿ ಆದರೆ ಹೇಗೆ? ಪ್ರಕರಣದ ಬಗ್ಗೆ ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖೆ ಆಗಲಿ. ಡಿಜಿ ಮತ್ತು ಐಜಿಪಿಗೆ ದೂರು ಸಲ್ಲಿಸಿದ ನಂತರ ದೆಹಲಿಗೆ ಹೋಗುತ್ತೇವೆ. ತನಿಖೆ ಹೇಗೆ ಮಾಡುತ್ತಾರೆ ಎಂದು ನೋಡಬೇಕು. ಅದು ಸಿಎಂಗೆ ಮತ್ತು ಪರಮೇಶ್ವರ್ಗೆ ಬಿಟ್ಟ ವಿಚಾರ. ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡ ಇದೆ. ಎಲ್ಲದಕ್ಕೂ ದಾಖಲೆ ಇದೆ ಎಂದಿದ್ದಾರೆ.
ಈ ನಡುವೆ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಹಾಕಿದ್ದಾರೆ. ಗರ್ಜಿಸುವ ಹುಲಿಗಳಿಗೆ ಸಿಡಿ ತೋರಿಸುವ ಕೆಲಸ ನಡೀತಿದೆ ಅಂದಿದ್ದಾರೆ. ಸಚಿವ ಎಂ.ಬಿ.ಪಾಟೀಲ್ ಇದರ ಹಿಂದಿರುವ ಡೈರೆಕ್ಟರ್, ಪ್ರೊಡ್ಯೂಸರ್ ಯಾರು ಅಂತಾ ಗೊತ್ತಾಗಬೇಕಿದೆ ಎಂದಿದ್ದಾರೆ.