ಆತ್ಮಹತ್ಯೆ ಹಿಂದೆ ಪ್ರೇಯಸಿಯ ಕೈವಾಡವಿಲ್ಲ ಎಂದು ವರದಿ ಸಲ್ಲಿಸಿದ ಸಿಬಿಐ
ಮುಂಬಯಿ: ಬಾಲಿವುಡ್ ಸೆಲೆಬ್ರಿಟಿಗಳ ಮ್ಯಾನೇಜರ್ ಆಗಿದ್ದ ಉಡುಪಿ ಮೂಲದ ದಿಶಾ ಸಾಲ್ಯಾನ್ ಸಾವಿನ ಪ್ರಕರಣ ಐದು ವರ್ಷಗಳ ಬಳಿಕ ಮರಳಿ ಮುನ್ನೆಲೆಗೆ ಬಂದಿರುವಾಗಲೇ ಇನ್ನೊಂದೆಡೆ ಈ ಕೇಸಿನ ಜೊತೆಗೆ ತಳುಕು ಹಾಕಿಕೊಂಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ನಟನ ಪ್ರೇಯಸಿಯಾಗಿದ್ದ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್ ನೀಡಿದೆ.
2020 ಜೂನ್ 14ರಂದು ಸುಶಾಂತ್ ಸಿಂಗ್ ರಜಪೂತ್ ಸಿಂಗ್ ತನ್ನ ಫ್ಲ್ಯಾಟ್‌ನಲ್ಲಿ ನೇಣಿಗೆ ಶರಣಾಗಿದ್ದರು. ಇದಕ್ಕಿಂತ ಆರು ದಿನ ಮೊದಲಷ್ಟೇ ಅವರಿಗೆ ಮ್ಯಾನೇಜರ್ ಆಗಿದ್ದ ದಿಶಾ ಸಾಲ್ಯಾನ್ ಕಟ್ಟಡದಿಂದ ಬಿದ್ದು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು. ಕೋವಿಡ್ ಕಾಲದಲ್ಲಿ ಬೆನ್ನುಬೆನ್ನಿಗೆ ಸಂಭವಿದ ಈ ಎರಡು ಘಟನೆಗಳು ಬಾಲಿವುಡ್‌ನಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದವು. ಎರಡು ಸಾವುಗಳಿಗೆ ಪರಸ್ಪರ ಸಂಬಂಧ ಇದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ವಹಿಸಲಾಗಿತ್ತು. ಸುಶಾಂತ್ ಸಿಂಗ್ ರಜಪೂತ್ ತಂದೆ ಮತ್ತು ಸಹೋದರಿ ಸಾವಿಗೆ ಪ್ರೇಯಸಿ ನಟಿ ರಿಯಾ ಚಕ್ರವರ್ತಿ ಕಾರಣ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಅವರ ಪಾತ್ರದ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲಾಗಿತ್ತು.
ಸಿಬಿಐ ಮುಂಬಯಿ ಸ್ಪೆಷಲ್ ಕೋರ್ಟಿಗೆ ಪ್ರಕರಣದ ತನಿಖೆ ಮುಕ್ತಾಯವಾದ ವರದಿ ಸಲ್ಲಿಸಿ ನಟಿ ರಿಯಾ ಚಕ್ರವರ್ತಿಗೆ ಕ್ಲೀನ್‌ಚಿಟ್ ನೀಡಿದೆ. ಸಿಬಿಐ ಅಧಿಕಾರಿ ರಾಜಶೇಖರ್ ಝಾ ಸಲ್ಲಿಸಿರುವ ವರದಿ ಪ್ರಕಾರ, ಇದೊಂದು ಆತ್ಮಹತ್ಯೆ ಪ್ರಕರಣ, ಆತ್ಮಹತ್ಯೆಗೆ ಯಾರೂ ಕುಮ್ಮಕ್ಕು ನೀಡಿಲ್ಲ.
ತನಿಖಾ ಸಂಸ್ಥೆ ಎರಡು ಕೇಸ್‌ಗಳಲ್ಲಿ ಕ್ಲೋಸರ್ ರಿಪೋರ್ಟ್ ಹಾಕಿದೆ. ಒಂದು ಕೇಸ್ ಆಗಸ್ಟ್ 2021ರಲ್ಲಿ ಸುಶಾಂತ್ ಸಿಂಗ್ ರಜಪೂತ್ ತಂದೆ ರಿಯಾ, ಆಕೆಯ ಕುಟುಂಬದವರು ಮತ್ತೆ ಕೆಲವರ ವಿರುದ್ಧ ಪಾಟ್ನದಲ್ಲಿ ದಾಖಲಿಸಿದ್ದರು. ಇನ್ನೊಂದು ಕೇಸ್ ಸೆಪ್ಟೆಂಬರ್‌ನಲ್ಲಿ ರಿಯಾ, ಸುಶಾಂತ್ ತಂಗಿ ಮತ್ತೆ ಡಾಕ್ಟರ್ ವಿರುದ್ಧ ಹಾಕಿದ್ದರು. ಎರಡು ಕೇಸ್‌ಗಳ ಕ್ಲೋಸರ್ ರಿಪೋರ್ಟ್ ಮುಂಬಯಿಯ ಸ್ಪೆಷಲ್ ಕೋರ್ಟಿಗೆ ಸಲ್ಲಿಸಲಾಗಿದೆ. ಸಿಬಿಐ ತನಿಖೆ ಪ್ರಕಾರ ಸುಶಾಂತ್ ಸಾವಿಗೆ ಯಾರೂ ಕಾರಣ ಅಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ದಿಶಾ ಸಾಲ್ಯಾನ್ ತಂದೆ ಸತೀಶ್ ಸಾಲ್ಯಾನ್ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಕೆಲದಿನಗಳ ಹಿಂದೆ ಬಾಂಬೆ ಹೈಕೋರ್ಟ್‌ಗೆ ದೂರು ನೀಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೊಲ್ಲುವುದಾಗಿ ಬೆದರಿಸಿದ್ದರು. ಅದಕ್ಕೆ ಅವರ ಸಾವಿನ ಬಗ್ಗೆ ಸಿಬಿಐ ತನಿಖೆ ಮಾಡಬೇಕು ಎಂದು ಅರ್ಜಿ ಹಾಕಿದ್ದರು. ಎರಡು ಸಾವುಗಳಿಗೆ ಲಿಂಕ್ ಇದೆ. ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆಯ ಪುತ್ರ ಮಾಜಿ ಸಚಿವ ಆದಿತ್ಯ ಠಾಕ್ರೆಯ ಕೈವಾಡವಿದ್ದು, ಈ ಕುರಿತು ಮರುತನಿಖೆಯಾಗಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದಾರೆ.